`ಜೀವನದ ರಹಸ್ಯಗಳು ಪ್ರಕಟಗೊಳ್ಳುವುದು ನಾವು ನಮ್ಮ ಚಿತ್ತವನ್ನು ಬದುಕಿನ ಪ್ರತಿ ಹಂತದಲ್ಲಿ ಜಾಗರೂಕ ಸ್ಥಿತಿಯಲ್ಲಿ ಇಟ್ಟಾಗ’ ಎನ್ನುವ ಯಜುರ್ವೇದದ ಮಾತಿನಂತೆ, ಜೀವನದ ಒಳಗಣ್ಣನ್ನು ತೆರೆದಿಟ್ಟು ನೋಡಲು ಬಯಸಿದ ಶರಣರ ವಚನಗಳು ತೀರ ಸಾಮಾನ್ಯನಿಗೆ ತಲುಪುವ ಉದ್ದೇಶವನ್ನಿಟ್ಟುಕೊಂಡು ಬಸವರಾಜ ಸ್ವಾಮಿ ಅವರು ಇಲ್ಲಿ ಅವನ್ನು ಸಂವಾದ ರೂಪದಲ್ಲಿ ಕಟ್ಟಿಕೊಡುವ ಸಾಹಸ ಮಾಡಿದ್ದಾರೆ. ಈ ಹಿಂದಿನ ಹಲವು ಕೃತಿಗಳಲ್ಲಿ ಬಸವರಾಜ ಸ್ವಾಮಿ ಅವರು ಶರಣರ ವಚನ ಹಾಗೂ ಅದರ ತಾತ್ಪರ್ಯವನ್ನು ಸಂಕ್ಷಿಪ್ತ ರೂಪದಲ್ಲಿ ನೀಡಿದ್ದು ಕಾಣಬಹುದು. ಆದರೆ ಈ ಕೃತಿಯಲ್ಲಿ ಅವರ ವಚನ ಸಾಹಿತ್ಯದ ಸಂಶೋಧನಾತ್ಮಕ ಆಸಕ್ತಿಗಳು ಆಳವಾಗಿ ಕೆಲಸ ಮಾಡಿವೆ.
ಬಸವರಾಜ ಸ್ವಾಮಿ ಅವರ ವಚನಗಳ ಆಧಾರಿತ ಈ ಕೃತಿಯಲ್ಲಿ ಸಂವಾದ ಸಾಮಾನ್ಯ ಜನರ ನಿಲುಕಿಗೆ ಸಿಗದಷ್ಟು ಎತ್ತರಕ್ಕಿದೆ. ಆದರೆ, ಅಕಾಡೆಮಿಕ್ ಆಗಿ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬಯಸುವ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಿಗೆ, ಪಂಡಿತರಿಗೆ ಈ ಕೃತಿ ಹೆಚ್ಚಿನ ಓದಿಗೆ ಹೇಳಿಮಾಡಿಸಿದಂತಿದೆ.
————
ಅರಿವೇ ಗುರು – ಸತ್ಯ ಸಂವಾದ
ಲೇಖಕರು – ಬಸವರಾಜ ಸ್ವಾಮಿ
ಪ್ರಕಾಶನ – ಶ್ರೀ ಬಸವ ಸೇವಾ ಪ್ರತಿಷ್ಠಾನ, ರಾಯಚೂರು
ಪುಟ – 156 + xii
ಬೆಲೆ – ರೂ.200
—————
ಹನ್ನೆರಡನೆ ಶತಮಾನದಲ್ಲಿ ನಡೆದ ವಚನ ಕ್ರಾಂತಿ ಒಂದು ಇತಿಹಾಸ. ಅದೊಂದು ಸಂವೇದನಾಶೀಲ ಮನಸುಗಳ ಮಹಾಜ್ಞಾನ ಸಂಗಮದ ವೈಚಾರಿಕ ಕ್ರಾಂತಿ! ಆ ಮನಸುಗಳ ಮೂಲಕ ತನುವಿನಲ್ಲಿ ಉಂಟಾಗಿರಬಹುದಾದ ಅಜ್ಞಾನವನ್ನು ಸಾವಿರಾರು ವಚನ ಸೂತ್ರಗಳಲ್ಲಿ ಬಂಧಿಸಿ ಕಟ್ಟಿಕೊಡುವಲ್ಲಿ ಶ್ರಮಿಸಿದವರು ಬಸವಾದಿ ಶರಣರು. ಇದನ್ನೆ `ವಚನ ಕ್ರಾಂತಿ’ ಎಂದು ಇನ್ನೊಂದು ಅರ್ಥದಲ್ಲಿ ಕನ್ನಡ ಸಾಹಿತ್ಯ ಗುರುತಿಸಿದೆ. ಅದು ವಾಸ್ತವದಲ್ಲಿ ಅರಿವಿನ ಕ್ರಾಂತಿ. ಕನ್ನಡ ಸಾಹಿತ್ಯದ ಬಹುದೊಡ್ಡ ಸಂಪತ್ತು ವಚನ ಸಾಹಿತ್ಯದ ಕಾಲಘಟ್ಟದ ವಚನಕಾರರು, ಶರಣರು, ಮೂಲತಃ ಒಂದು ಧಾರ್ಮಿಕ, ಸಾಮಾಜಿಕ ಆಂಧೋಲನದಲ್ಲಿ ಬದುಕಿದವರು. ವಚನಗಳು ಆ ಚಳುವಳಿಯ ಸಂದರ್ಭದ ಭಾವ, ಭಾವನೆ ಮತ್ತು ವಿಚಾರಗಳನ್ನು ತಿಳಿಸುವ ಮಾಧ್ಯಮವಾಗಿತ್ತು. ವಚನಕಾರರಿಗೆ ಅವು ಸಾಹಿತ್ಯದ ಪ್ರಕಾರವೆಂದಾಗಲಿ, ಕಾವ್ಯವೆಂದಾಗಲಿ ಗುರುತಿಸಿಕೊಳ್ಳುವ ಅಗತ್ಯವೂ, ಮುಖ್ಯವೂ ಆಗಿರಲಿಲ್ಲ. ವಚನಗಳು ಪದ್ಯವೂ ಅಲ್ಲ, ಗದ್ಯವೂ ಅಲ್ಲದ ಒಂದು ವಿಶಿಷ್ಟ ಪದಬಂಧ. `ವೃತ್ತಗಂಧಿ’ಎAಬ ವಿಶೇಷ ಛಂದೋಬAಧಕ್ಕೆ ಇವು ಸೇರುತ್ತವೆ. ಪದ್ಯದ ಛಂಧೋಬAಧುರತೆ ಮತ್ತು ಗದ್ಯದ ಮುಕ್ತತೆ `ವೃತ್ತಗಂಧಿ’ಯ ಗುಣವಿಶೇಷ. ಅಂತೆಯೆ, ವಚನಗಳಲ್ಲಿ ಲಯ ಮಾಧುರ್ಯ ಮತ್ತು ಗದ್ಯದ ಸ್ಪಷ್ಟತೆ ಕಾಣುತ್ತೇವೆ. ಸರಳವಾಗಿ ಓದಿಸಿಕೊಂಡು ಅರ್ಥೈಸಿಕೊಳ್ಳುವಲ್ಲಿ ಅವು ನೆರವಾದವು.
ಬಸವರಾಜ ಸ್ವಾಮಿ ಅವರ ಅಂತಹ ವಚನಗಳ ಆಧಾರಿತ ಕೃತಿ `ಅರಿವೇ ಗುರು’ ಮುಖ್ಯವಾಗಿ ನಮ್ಮೆದುರು ನಿಲ್ಲುವುದು ಎರಡು ಕಾರಣಕ್ಕೆ. ಒಂದು ಅನುಭವ ಮಂಟಪದ ಕಲ್ಪನೆಯಿಂದಾಗಿ, ಎರಡನೆಯದ್ದು ಆ ಸಂದರ್ಭದಲ್ಲಿ ನಡೆದಿರಬಹುದಾದ ಸಂವಾದ, ಸಂಭಾಷಣೆ ಅಥವಾ ಚರ್ಚೆಯಿಂದಾಗಿ. ಅಂತಹ ಸಂವಾದ ರೂಪದ ಮಾತುಗಳನ್ನು ಬಸವರಾಜ ಸ್ವಾಮಿ ಅವರು ಇಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇಲ್ಲಿ ಅಂತಹ ೪೪ ಸಂವಾದಗಳಿವೆ. ಅವನ್ನು ಸತ್ಯ ಸಂವಾದ ಎಂದು ಹೆಸರಿಸುವ ಮೂಲಕ ಅರಿವು, ಕಾಯ, ಜ್ಞಾನ, ಗುರು, ತನು, ಮನ, ಸತ್ಯ, ಭಕ್ತಿ, ಸುಖ… ಇಂತಹ ವಿಷಯಗಳ ಸುತ್ತಲು ಒಂದು ರೀತಿಯ ಸ್ವಾನುಭವ ಚಿಂತನೆಯ ಗೂಢಾರ್ಥವನ್ನು ಹುಡುಕುವ ರೀತಿಯಲ್ಲಿ ಅವು ನಮಗೆ ಕಾಣುತ್ತವೆ. ಅನುಭವ ಮಂಟಪದಲ್ಲಿ ನಡೆದದ್ದು `ಸತ್ಸಂಗ’ ಎನ್ನುವ ರೀತಿಯಲ್ಲಿ ಅವು ಬಿಂಬಿತವಾಗಿವೆ. ಮುಖ್ಯವಾಗಿ ಈ ವಿಷಯಗಳನ್ನೆ ಕೇಂದ್ರೀಕರಿಸಿ ಅವನ್ನು ಅರಿವೆಂಬ ಗುರುವಿನ ಅರ್ಥದಲ್ಲಿ ಸಮೀಕರಿಸಿದ್ದಾರೆ ಲೇಖಕರು. ಅರಿವು ಎಂಬುದು ಬುದ್ಧಿ, ತಿಳುವಳಿಕೆ, ಜ್ಞಾನ, ಎಂಬರ್ಥದಲ್ಲಿ ಇವನ್ನು ಪಡೆಯಲು ತನ್ನನ್ನು ತಾನು ಅರಿತು ಗುರುವಾಗುವ ಹಂತಕ್ಕೆ ತಲುಪುವ ವಿಶಾಲ ಅರ್ಥದಲ್ಲಿ ವಿವರಿಸಿದ್ದಾರೆ. ಅರಿವಿನ ಕೃಷಿಯಲ್ಲಿ ಸಫಲರಾದ ಶರಣರು `ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಎನ್ನುವ ತಾತ್ಪರ್ಯದಲ್ಲಿ `ನಿನಗೆ ನೀನೆ ಗುರು’ ಎನ್ನುವ ಸಂದೇಶ ಸಾರಿದ್ದಾರೆ. ಹಾಗೆ ನೋಡಿದರೆ ಸತ್ಯ ಸಂವಾದದ ಮೊದಲ ಅಧ್ಯಾಯದಲ್ಲೆ ಬರುವ `ಕಾಯ ಉಳ್ಳವನು ಗುರುವಲ್ಲ’ ಎಂಬ ಅಧ್ಯಾಯದಲ್ಲಿ ಬಸವಣ್ಣ ಮತ್ತು ಚೆನ್ನಬಸವಣ್ಣನವರ ನಡುವೆ ನಡೆವ ಸಂವಾದದಲ್ಲಿ ಬಸವಣ್ಣ ಗುರುವೆಂದರೆ ಯಾರೆಂದು ವಿವರಿಸಲು ಕೇಳಿದ ಸಂದರ್ಭದಲ್ಲಿ ಚೆನ್ನಬಸವಣ್ಣ `ಗುರುದೇವ ಒಬ್ಬ ವ್ಯಕ್ತಿಯಲ್ಲ. ಕಾಯವುಳ್ಳವನು ಗುರುವಲ್ಲ. ಗುರುದೇವ ಅಕಾಯ. ಗುರು ವ್ಯಕ್ತನಲ್ಲ, ಅವ್ಯಕ್ತ ಶಕ್ತಿ! ಈತ ಕಾಯ ಮತ್ತು ಕಾಯವನ್ನು ಆವರಿಸಿದ ಮನಕ್ಕೆ ಕಾಯದಲ್ಲೆ ಇದ್ದು ಬೋಧಿಸುತ್ತಾನೆ. ಹೀಗೆ ಕ್ಷಣ ಕ್ಷಣಕ್ಕೂ ಬೋಧಿಸುವ ಗುರುದೇವನನ್ನು ಮನವೇ ಕಂಡುಕೊಳ್ಳಬೇಕು’ಎAಬ ಮಾತಿದೆ.
ಆ ಫಲವೆ ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ಅನೇಕ ಕೆಳವರ್ಗದಿಂದ ಬಂದು, ಶರಣರಾಗಿ, ವಚನಗಳು ರಚಿಸುವ ಮೂಲಕ ತಮಗೆ ತಾವೆ ಅರಿವಿನ ಗುರುವಾದ ಉದಾಹರಣೆಗಳನ್ನು ಇಲ್ಲಿನ ಸಂಗತಿಗಳಲ್ಲಿ ಕಾಣಬಹುದು. ಇಂತಹ ಸಂಗತಿಗಳು ಬಸವಣ್ಣ, ಅಲ್ಲಮಪ್ರಭು ಮತ್ತು ಚೆನ್ನವಸವಣ್ಣನವರ ಮಾರ್ಗದರ್ಶನದಲ್ಲಿ, ಕೆಳವರ್ಗದ ಇತರೆ ಶರಣರು ತಾವೂ ಸಹ ವಚನಗಳನ್ನು ರಚಿಸಿ, ಅವನ್ನು ಚರ್ಚಿಸಿ, ತಮ್ಮ ಅರಿವಿನ ಅಗಾಧತೆಯನ್ನು ಹೆಚ್ಚಿಸಿಕೊಂಡದ್ದನ್ನು ಇಲ್ಲಿ ನೋಡಬಹುದು. ಇಲ್ಲಿ ಸಾಮಾನ್ಯ ಶರಣನೂ, ಅರಿವಿನ ಮೂಲಕ ಗುರುವಿನ ಸ್ಥಾನಕ್ಕೇರಲು ಸಾಧ್ಯ ಎಂಬುದು ಈ ಕೃತಿ ಹೇಳುವ ಪ್ರಮುಖ ಆಶಯ.
****
ಬಹುತೇಕ ಜನರಿಗೆ ವಚನ ಸಾಹಿತ್ಯ, ಅನುಭವ ಮಂಟಪ ತಿಳಿದಿದೆ. ಆದರೆ ಅನುಭವ ಮಂಟಪದಲ್ಲಿ ಏನೆಲ್ಲ ಚರ್ಚೆ ಆಗಿರಬಹುದು? ಹೇಗೆ ಆಗಿರಬಹುದು? ಸಾಮಾನ್ಯರೂ ಅಲ್ಲಿ ವಚನ ರಚನೆ ಮಾಡಲು ಹೇಗೆ ಸಾಧ್ಯವಾಯಿತು? ಎಂಬೆಲ್ಲವು ಕುತೂಹಲದ ಸಂಗತಿಗಳು ತಿಳಿಯವು. ಆ ಮೂಲಕ ಶರಣ ಮನಸುಗಳ ಮೇಲೆ ಈ ಚರ್ಚೆ ಅಥವಾ ಸಂವಾದ ಸಾಮಾಜಿಕವಾಗಿ ಧಾರ್ಮಿಕವಾಗಿ ಹೇಗೆ ಬದಲಾವಣೆಗಳನ್ನು ತಂದಿರಬಹುದು ಎಂಬೆಲ್ಲ ಪ್ರಶ್ನೆಗಳಿಗೆ ಈ ಸತ್ಯ ಸಂವಾದದ ಮೂಲಕ ಉತ್ತರ ದೊರಕಿಸಲು ಲೇಖಕರು ಪ್ರಯತ್ನಿಸಿದ್ದಾರೆ.
ಬಸವಣ್ಣ-ಶರಣರೊಬ್ಬರ ಲೋಕದ ನಂಟಿನ ವಿಷಯದ ಚರ್ಚೆಯ ಸಂವಾದ-೭, ಮಾತಿನಿಂದಲೆ ಸುಖ-ದುಖ ಎನ್ನುವ ವಿಷಯ ಕುರಿತು ಕಾಳವ್ವೆ-ಚೆನ್ನಬಸವಣ್ಣರ ಸಂವಾದ-೧೭, ಉದಕದೊಳಗೆ ಬಚ್ಚಿಟ್ಟ ಬಯಕೆಯ ಕಿಚ್ಚು ಕುರಿತು ಗೊಗ್ಗವ್ವೆ-ಬಸವಣ್ಣನ ಸಂವಾದ-೨೦, ಸತ್ಯಕ್ಕ-ಬಸವಣ್ಣರ ಮನುಷ್ಯನ ತಿಳುವಳಿಕೆಯ ಕುರಿತ ಸಂವಾದ-೨೪, ದೇವರ ಕಲ್ಪನೆಯ ಕೊಟ್ಟಣದ ಸೋಮಮ್ಮ, ದುಗ್ಗವ್ವೆ ಹಾಗೂ ಬಸವಣ್ಣನ ಸಂವಾದ-೨೬, ಅಜ್ಞಾನದ ಕುರುಡುತನದ ಲದ್ದೆಯ ಸೋಮಯ್ಯ, ಸಗರದ ಬೊಮ್ಮಣ್ಣ, ಸುಂಕದ ಬಂಕಣ್ಣ, ಬಸವಣ್ಣ ಹಾಗೂ ವಚನ ಭಂಡಾರಿ ಶಾಂತರಸರ ಸಂವಾದ-೨೭, ಜಾತಿ, ಮತ, ಪಂಥಗಳ ಮೂಲಕ ಲಿಂಗ ಕುರಿತ ಸಂವಾದ-೩೧, ಕಲ್ಯಾಣದ ಪುಣ್ಯಾಂಗನೆಯರ ಕುರಿತ ಸಂವಾದ-೩೩, ತನುವಿನ ಗುಣಾವಗುಣಗಳ ಕುರಿತು ಸಂವಾದ-೩೬ ಸುಲಿಗೆಕೋರನೊಬ್ಬನ ಯೋಚನೆಯ ದಿಕ್ಕನ್ನೆ ಬದಲಾಯಿಸುವ ಸಂವಾದ-೩೮, ಚೆನ್ನಬಸವಣ್ಣ, ಅಲ್ಲಮ, ಸಿದ್ಧರಾಮರ ತೀಕ್ಷ÷್ಣತೆಯ ಸಂವಾದ-೩೯, ಬಸವಣ್ಣ-ಭೋಗಣ್ಣನ ಸಂವಾದ-೪೦, ಭೀಮಣ್ಣ-ಬಸವಣ್ಣನ ಸಂವಾದ-೪೧, ಅಕ್ಕಮಹಾದೇವಿ-ಅಲ್ಲಮನ ಸಂವಾದ-೪೪ ಈ ಹಿನ್ನಲೆಯಲ್ಲಿ ಪ್ರಮುಖ ಎನಿಸುತ್ತವೆ.
ಇಲ್ಲಿ ವಚನ ಸಾಹಿತ್ಯದ ದಿಗ್ಗಜರಾದ ಬಸವಣ್ಣ-ಚೆನ್ನವಸಬಣ್ಣನ ನಡುವಿನ ಸಂವಾದವಿದೆ, ಬಸವಣ್ಣ-ಅಲ್ಲಮಪಭುಗಳ ನಡುವಿನ ಸಂವಾದವಿದೆ, ಕೇತಯ್ಯ, ಅಮ್ಮದೇವಯ್ಯ, ಡೋಹರ ಕಕ್ಕಯ್ಯ, ಹಡಪದ ಅಪ್ಪಣ್ಣ, ಸಿದ್ಧರಾಮ ಶಿವಯೋಗಿಗಳು, ಮೋಳಿಗೆ ಮಾರಯ್ಯ, ಭೋಗಣ್ಣ, ಅಂಬಿಗರ ಚೌಡಯ್ಯ, ಮಾಚಿದೇವ, ಮಾಚಯ್ಯ, ವರದ ಸಂಕಣ್ಣ, ಮಧುವಯ್ಯ, ಮಾರಯ್ಯ ಬ್ರಹ್ಮಯ್ಯ, ಢಕ್ಕೆಯ ಬೊಮ್ಮಣ್ಣ, ಸೋಮಯ್ಯ, ಭೀಮಯ್ಯ, ರೇಚದ ಬಂಕಣ್ಣ, ಲದ್ದೆಯ ಸೋಮಯ್ಯ, ಶಾಂತರಸ, ಶಿವಲೆಂಕ ಮಂಚಣ್ಣ, ಸುಂಕದ ಬಂಕಣ್ಣ, ಹೆಂಡದ ಮಾರಯ್ಯ, ಕಲ್ಲಯ್ಯ, ಸೊಡ್ಡಳ ಬಾಚರಸರಂತಹ ಶರಣರ, ಅಲ್ಲದೆ ಅಕ್ಕಮ್ಮ, ಅಕ್ಕಮಹಾದೇವಿ, ರಾಯಮ್ಮ, ಕಾಳವ್ವೆ, ದುಗ್ಗಳೆ, ಕೇತಲಾದೇವಿ, ಮಹಾದೇವಿ, ಸತ್ಯಕ್ಕ, ಬೊಂತಾದೇವಿ, ರಾಯಮ್ಮ, ಗೊಗ್ಗವ್ವೆ, ಆಯ್ದಕ್ಕಿ ಲಕ್ಕöಮ್ಮ, ಕಾಮಮ್ಮ, ಕೊಟ್ಟಣದ ಸೋಮಮ್ಮರಂತಹ ಶರಣೆಯರ ಮಧ್ಯದ ಸಂವಾದಗಳಿಗೆ ಸಾಕ್ಷಿಯಾಗುವ ಸಾಮಾನ್ಯ ಶರಣರ ಸೃಜನಶೀಲತೆ ಎದ್ದು ಕಾಣುತ್ತದೆ. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮರಷ್ಟು ಎತ್ತರಕ್ಕೆ ಸಾಮಾನ್ಯ ಶರಣರು ಸಂವಾದದಲ್ಲಿ ಏರದಿದ್ದರೂ ಅವರ ಬೆಳವಣಿಗೆಯ ದೃಷ್ಟಿಯಿಂದ ಅವರಿಗೆ ಸಿಗುವ ಅವಕಾಶಗಳು ಅವರೂ ಎಲ್ಲರಂತೆ ಸಮಾನರು ಎಂಬುದನ್ನು ಈ ಸಂವಾದಗಳು ಸಾಬೀತು ಪಡಿಸುತ್ತವೆ.
****
`ಜೀವನದ ರಹಸ್ಯಗಳು ಪ್ರಕಟಗೊಳ್ಳುವುದು ನಾವು ನಮ್ಮ ಚಿತ್ತವನ್ನು ಬದುಕಿನ ಪ್ರತಿ ಹಂತದಲ್ಲಿ ಜಾಗರೂಕ ಸ್ಥಿತಿಯಲ್ಲಿ ಇಟ್ಟಾಗ’ ಎನ್ನುವ ಯಜುರ್ವೇದದ ಮಾತಿನಂತೆ, ಜೀವನದ ಒಳಗಣ್ಣನ್ನು ತೆರೆದಿಟ್ಟು ನೋಡಲು ಬಯಸಿದ ಶರಣರ ವಚನಗಳು ತೀರ ಸಾಮಾನ್ಯನಿಗೆ ತಲುಪುವ ಉದ್ದೇಶವನ್ನಿಟ್ಟುಕೊಂಡು ಬಸವರಾಜ ಸ್ವಾಮಿ ಅವರು ಇಲ್ಲಿ ಅವನ್ನು ಸಂವಾದ ರೂಪದಲ್ಲಿ ಕಟ್ಟಿಕೊಡುವ ಸಾಹಸ ಮಾಡಿದ್ದಾರೆ. ಈ ಹಿಂದಿನ ಹಲವು ಕೃತಿಗಳಲ್ಲಿ ಬಸವರಾಜ ಸ್ವಾಮಿ ಅವರು ಶರಣರ ವಚನ ಹಾಗೂ ಅದರ ತಾತ್ಪರ್ಯವನ್ನು ಸಂಕ್ಷಿಪ್ತ ರೂಪದಲ್ಲಿ ನೀಡಿದ್ದು ಕಾಣಬಹುದು. ಆದರೆ ಈ ಕೃತಿಯಲ್ಲಿ ಅವರ ವಚನ ಸಾಹಿತ್ಯದ ಸಂಶೋಧನಾತ್ಮಕ ಆಸಕ್ತಿಗಳು ಆಳವಾಗಿ ಕೆಲಸ ಮಾಡಿವೆ.
ಕೊನೆಯಲ್ಲಿ ಒಂದು ಮಾತು, ಬಸವಾದಿ ಶರಣರಿಂದ ರಚಿಸಲ್ಪಷ್ಟ ಉತೃಷ್ಟ ಮತ್ತು ಸರಳ ಕಾವ್ಯ ವಚನ. ಅವನ್ನು ಊಟದಲ್ಲಿನ ಉಪ್ಪಿನ ಕಾಯಿಯಂತೆ ವಚನಕಾರರು ನೀಡಿದ್ದಾರೆ. ಆದರೆ ಬಸವರಾಜ ಸ್ವಾಮಿ ಅವರ ವಚನಗಳ ಆಧಾರಿತ ಈ ಕೃತಿಯಲ್ಲಿ ಸಂವಾದ ಸಾಮಾನ್ಯ ಜನರ ನಿಲುಕಿಗೆ ಸಿಗದಷ್ಟು ಎತ್ತರಕ್ಕಿದೆ. ಆದರೆ, ಅಕಾಡೆಮಿಕ್ ಆಗಿ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬಯಸುವ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಿಗೆ, ಪಂಡಿತರಿಗೆ ಈ ಕೃತಿ ಹೆಚ್ಚಿನ ಓದಿಗೆ ಹೇಳಿಮಾಡಿಸಿದಂತಿದೆ.
ಬಸವರಾಜ ಸ್ವಾಮಿ ಅವರ ವಚನ ಸಾಹಿತ್ಯದ ಅಧ್ಯಯನ, ತಿಳುವಳಿಕೆ, ಜನರಿಗೆ ಅದನ್ನು ತಿಳಿಸಬೇಕೆಂಬ ತುಡಿತ ಹೇಗೆಂದರೆ ಜನಸಾಮಾನ್ಯರೂ ಜಾಗೃತಾವಸ್ಥೆಗೆ ಸಾಕ್ಷಿಯಾಗಬೇಕೆನ್ನುವುದನ್ನು ಇಲ್ಲಿನ ಸತ್ಯ ಸಂವಾದಗಳು ಸಾಬೀತು ಪಡಿಸುತ್ತವೆ.
– ಮಂಡಲಗಿರಿ ಪ್ರಸನ್ನ, ರಾಯಚೂರು
ಮೊ: 9449140580