ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು.29: ತಾಲ್ಲೂಕಿನ ನೂತನ ತಹಶೀಲ್ಧಾರ್ ಆಗಿ ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕರಾಗಿದ್ದ ಎಚ್.ಬಾಲಕೃಷ್ಣರನ್ನು ನೇಮಕ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಎನ್.ಸುಶೀಲರವರು ಆದೇಶ ಹೊರಡಿಸಿದ್ದಾರೆ.
ಆದೇಶ ಹೊರಬಿದ್ದ ಕೆಲ ಗಂಟೆಗಳಲ್ಲಿಯೇ ಪಟ್ಟಣದ ತಾಲ್ಲುಕು ಆಡಳಿತ ಸೌಧಕ್ಕೆ ಆಗಮಿಸಿದ ನೂತನ ತಹಶೀಲ್ದಾರ್ ಎಚ್.ಬಾಲಕೃಷ್ಣರವರು ಅಧಿಕಾರ ಸ್ವೀಕಾರ ಮಾಡಿದ್ದು, ಕಂದಾಯ ಇಲಾಖೆಯ ಬಹುತೇಕ ಸಿಬ್ಬಂದಿ ಹೂ ಗುಚ್ಚ ನೀಡುವ ಮೂಲಕ ಅವರನ್ನು ಸ್ವಾಗತಿಸಿದ್ದಾರೆ.
ಈ ಮೊದಲ ದೇವನಹಳ್ಳಿಯ 51ನೇ ತಹಶೀಲ್ಧಾರ್ (ಪ್ರಭಾರ) ಆಗಿ ಎರಡು ತಿಂಗಳು ಕಾರ್ಯನಿರ್ವಹಿಸಿದ್ದ ಎಚ್.ಬಾಲಕೃಷ್ಣರವರು ಕಾಕತಾಳೀಯವಂತೆ ಇದೀಗಾ 61ನೇ ತಹಶೀಲ್ಧಾರ್ ಅಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕು ಆಡಳಿತ ಸೌಧ ಆವರಣವನ್ನು ಜನಸ್ನೇಹಿಯಾಗಿ ಬದಲಾವಣೆ ಮಾಡಿ, ಉದ್ಯಾನಗಳಿಂದ ಕಂಗೊಳ್ಳಿಸುವ ಕಚೇರಿಯನ್ನಾಗಿ ಮಾಡುವ ಇಚ್ಛೆ ಹೊಂದಿದ್ದು, ಮೂಲಭೂತ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುವುದು ಎಂದು ದೇವನಹಳ್ಳಿ ನೂತನ ತಹಶೀಲ್ದಾರ್ ಎಚ್.ಬಾಲಕೃಷ್ಣ ತಿಳಿಸಿದರು.
ಕಚೇರಿಗಳಿಗೆ ಹೆಚ್ಚು ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಲಾಗುವುದು, ಈಗಾಗಲೇ ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿರುವ ಬಡ ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಹಕ್ಕು ಪತ್ರಗಳನ್ನು ವಿತರಣೆ ಮಾಡಿ, ಸಕ್ರಮಗೊಳ್ಳಿಸುತ್ತೇವೆ. ಆಶ್ರಯ ಯೋಜನೆಯ ಮೂಲಕ ಸೂರು ಕಲ್ಪಿಸುವ ಅಭಿಲಾಷೆ ಹೊಂದಿದ್ದೇನೆ ಮುಂದಿನ ವಾರದಲ್ಲಿಯೇ ಅಧಿಕಾರಿಗಳ ಸಭೆಯನ್ನು ಕರೆದು ಸರ್ಕಾರಿ ರಾಜಕಾಲುವೆ, ಜಾಗಗಳನ್ನು ಒತ್ತುವರಿ ಮಾಡಿರುವವ ವಿರುದ್ಧ ಕಠಿಣವಾಗಿ ಕ್ರಮ ಕೈಗೊಳ್ಳುಲು ಸೂಚನೆ ನೀಡಲಾಗುವುದು, ಸ್ಮಶಾನ ರಹಿತ ಗ್ರಾಮಗಳಲ್ಲಿ ಭೂಮಿಯನ್ನು ಗುರುತಿಸಿ ರುದ್ರಭೂಮಿಯನ್ನು ಗುರುತಿಸುತ್ತೇವೆ’ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿ ಆರ್ಎಚ್ಓ ಗಂಗಾಧರಪ್ಪ, ಗ್ರೇಡ್-2 ತಹಶೀಲ್ದಾರ್ ಉಷಾ, ಶಿರಸ್ತೇದಾರ ಭರತ್, ಶಶಿಕಲಾ, ಕಂದಾಯ ನೌಕರರ ಸಂಘದ ಸಿಬ್ಬಂದಿ, ಸಾರ್ವಜನಿಕರು, ಮುಖಂಡರು ಇದ್ದರು.