ಸುದ್ದಿಮೂಲ ವಾರ್ತೆ ,
ದಾವಣಗೆರೆ ಏ ೦೫ :ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್ಎ ರವೀಂದ್ರನಾಥ್ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಂಗಳವಾರ ದಾವಣಗೆರೆ ತಾಲೂಕಿನ ಶಿರಮಗೊಂಡನ ಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ನಾನೇ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಎಸ್.ಎ. ರವೀಂದ್ರನಾಥ್ ಕಣದಿಂದ ಹಿಂದೆ ಸರಿಯುತ್ತಿದ್ದಂತೆ ಇತ್ತ ನಿವಾಸದ ಮುಂದೆ ಸಾಕಷ್ಟು ಬೆಂಬಲಿಗರು ಜಮಾಯಿಸಿದ್ದರು. ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯದಂತೆ, ಬೇಕಿದ್ದರೆ 25 ಸಾವಿರ ಅಂತರದಿಂದ ಗೆಲ್ಲಿಸುತ್ತೇವೆ. ಜೊತೆಗೆ ಪಕ್ಷದ ವರಿಷ್ಠರ ಮನವೊಲಿಸುವ ಕೆಲಸ ಕೂಡ ಮಾಡುತ್ತೇವೆ ಎಂದ ಬೆಂಬಲಿಗರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಸಿಎಂ ಬೊಮ್ಮಾಯಿ ದಾವಣಗೆರೆ ಉತ್ತರಕ್ಕೆ ಎಸ್.ಎ. ರವೀಂದ್ರನಾಥ್ ಅಭ್ಯರ್ಥಿ ಎಂದು ಹೇಳಿದ್ದರು. ನನಗೆ ಟಿಕೆಟ್ ಬೇಡ, ಹೊಸಬರಿಗೆ ಅವಕಾಶ ಕೊಡಿ ಎಂದು ರವೀಂದ್ರನಾಥ್ ಹೇಳಿದ್ದರು. ಯಡಿಯೂರಪ್ಪ ಅವರು ಸ್ವಯಂ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಅವರಾದ ಬಳಿಕ ಹಿರಿಯ ಅಂದರೆ ನಾನೇ ಇರೋದು. ಹಾಗಾಗಿ ನಾನು ಕೂಡ ನಿವೃತ್ತಿ ಘೋಷಣ ಮಾಡಿಕೊಂಡಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.