ಸುದ್ದಿಮೂಲ ವಾರ್ತೆ
ಚಿಂತಾಮಣಿ, ಆ.27: ಗ್ರಾಮೀಣ ಆಟಗಳಿಂದ ಗ್ರಾಮಗಳಲ್ಲಿ ಸಾಮರಸ್ಯ, ಸೌಹಾರ್ದತೆ ಬೆಳೆಯುತ್ತದೆ. ದ್ವೇಷ, ಅಸೂಯೆ ಮಾಯವಾಗುತ್ತದೆ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಟಿ.ವಿ.ನಾಗರಾಜ ಅಭಿಪ್ರಾಯಪಟ್ಟರು.
ತಾಲ್ಲೂಕಿನ ತಳಗವಾರ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ ಚಿಂತಾಮಣಿ ಘಟಕದ ವತಿಯಿಂದ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಹುಲಿಗೆತ್ತು ಗ್ರಾಮೀಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯರನ್ನು ಕೇಳಿದರೆ ಈಗಲೂ ಒಂದು ಕಥೆ ಹೇಳಿಯೇ ಹೇಳುತ್ತಾರೆ. ಜಾನಪದ ಕಥೆ ಎಂದರೆ ಜ್ಞಾನ, ತಿಳುವಳಿಕೆ. ಮರೆಯಾಗುತ್ತಿರುವ ಗ್ರಾಮೀಣ ಆಟಗಳನ್ನು ಬೆಳೆಸಬೇಕಾಗಿದೆ ಗ್ರಾಮೀಣ ಆಟಗಳಿಂದ ಮಕ್ಕಳಲ್ಲಿ ತುಂಟತನ ಮಾಯವಾಗಿ ಏಕಾಗ್ರತೆ, ದೂರದೃಷ್ಟಿ ಬೆಳೆಯುತ್ತದೆ. ಮಕ್ಕಳನ್ನು ಮೊಬೈಲ್, ದೂರದರ್ಶದಿಂದ ಮುಕ್ತಿಗೊಳಿಸಿ ಗ್ರಾಮೀಣ ಆಟಗಳ ಪರಿಚಯವನ್ನು ಮಾಡಿಸಬೇಕಾಗಿದೆ ಎಂದರು.
ಹಿಂದೆ ಹಿರಿಯರು ತಮ್ಮ ಬೇಸರ, ಬೇಜಾರು ಕಳೆಯಲು ಗ್ರಾಮೀಣ ಆಟಗಳನ್ನು ಆಡುತ್ತಿದ್ದರು. ಈಗ ಮನೆಯಲ್ಲಿ ಹೆಣ್ಣುಮಕ್ಕಳು ಕುಳಿತು ಆಡುವ ಗ್ರಾಮೀಣ ಆಟಗಳನ್ನು ಮನೆಗಳಲ್ಲಿ ಆಡಿದರೆ ಮನೆಯವರ ಪರಸ್ಪರ ವೈಯಕ್ತಿಯ ದ್ವೇಷಗಳನ್ನು ಕಳೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಚಿಂತಾಮಣಿ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಲೀಲಾ ಲಕ್ಷ್ಮಿನಾರಾಯಣ್ ಮಾತನಾಡಿ ಗ್ರಾಮೀಣ ಕ್ರೀಡೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮೊದಲಿಗೆ ಹುಲಿಗೆತ್ತು (ಹುಲಿ-ಕುರಿ) ಎಂಬ ಅಪ್ಪಟ ಗ್ರಾಮೀಣ ಕ್ರೀಡೆಯನ್ನು ಪ್ರಯೋಗಾತ್ಮಕವಾಗಿ ಸಂಘಟಿಸಲಾಗುತ್ತಿದೆ. ಇದರೊಂದಿಗೆ ಹಲವಾರು ಕ್ರೀಡೆಗಳನ್ನು ರಾಜ್ಯಮಟ್ಟದಲ್ಲಿ ಜನಪ್ರಿಯಗೊಳಿಸುವ ಕಾರ್ಯಕ್ರಮಗಳು ಇವೆ ಎಂದರು.
ಪ್ರವಚನಕಾರ ತಳಗವಾರ ಆನಂದ್ ಮಾತನಾಡಿ ಜಾನಪದ ಸಾಹಿತ್ಯ, ಕಲೆ, ಸಂಸ್ಕöÈತಿ ಇದು ಹಿರಿಯರ ಅನುಭವದ ಸಾರವಾಗಿದೆ. ಇಂದಿನ ಆಧುನಿಕ ಯುಗದ ಜೀವನ ಶೈಲಿಯ ಒತ್ತಡಗಳನ್ನು ನಿವಾರಿಸಲು ಈ ಗ್ರಾಮೀಣ ಆಟಗಳು ಸಹಕಾರಿಯಾಗಿದೆ. ಮನಸ್ಸನ್ನು ಉಲ್ಲಾಸವಾಗಿಡಲು, ಚೇತೋಹಾರಿಯಾಗಿಡಲು ಗ್ರಾಮೀಣ ಆಟಗಳು ಪ್ರಯೋಜನಕಾರಿಯಾಗಿದೆ ಇವುಗಳನ್ನು ಈಗ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.
ಹುಲಿಗೆತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಭಾರತಿ ಪ್ರಾರ್ಥನೆಯನ್ನು ಮಾಡಿದರು, ಸಾಹಿತಿ ಸೀತಮ್ಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.