ಸುದ್ದಿಮೂಲ ವಾರ್ತೆ
ಮೈಸೂರು,ಅ.18 : ಯೋಗಭ್ಯಾಸವೂ ಕೂಡ ವಿವಿಧ ಖಾಯಿಲೆಗಳಿಗೆ ಉತ್ತಮ ಚಿಕಿತ್ಸಾ ವಿಧಾನವಾಗಿದ್ದು, ಪುರಾತನ ಯೋಗ ಮತ್ತು ನ್ಯಾಚರೋಪತಿ ಆರೋಗ್ಯವನ್ನು ಸಂರಕ್ಷಣೆ ಮಾಡುವಂತಹ ಅಸ್ತ್ರಗಳು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅರಮನೆ ಮುಂಭಾಗದ ಆವರಣದಲ್ಲಿ ಬುಧವಾರ ಯೋಗ ದಸರಾ ಉಪಸಮಿತಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ದಸರಾ ಉತ್ಸವದಲ್ಲಿ ಯೋಗಭ್ಯಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಹಣ, ಆಸ್ತಿ, ಸಂಪತ್ತು ಕಳೆದುಕೊಂಡರೆ ಮರಳಿ ಪಡೆದುಕೊಳ್ಳಬಹುದು. ಆದರೆ, ಆರೋಗ್ಯ ಕೆಟ್ಟರೆ ಅದು ತುಂಬಲಾರದ ನಷ್ಟ. ಪ್ರತಿನಿತ್ಯ ನಿಯಮಿತವಾದ ವ್ಯಾಯಾಮ, ನಡಿಗೆ, ಕ್ರೀಡಾಭ್ಯಾಸದ ಜೊತೆಗೆ ಮನಸ್ಸನ್ನು ಉಲ್ಲಾಸದತ್ತ ಕೊಂಡೊಯ್ಯಲಿದೆ ಎಂದು ತಿಳಿಸಿದರು.
ಈ ವೇಳೆ ಗುರು ಶರತ್ ಜೋಯಿಸ್ ಮತ್ತು ಅವರ ವಿದೇಶಿ ಶಿಷ್ಯ ವೃಂದದವರು ಅಷ್ಟಾಂಗ ಯೋಗಾಭ್ಯಾಸ ಮಾಡಿದರು. ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪ, ಯೋಗ ದಸರಾ ಉಪ ಸಮಿತಿಯ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷದ ಹೇಮಂತ್, ಮಹೇಶ್, ಉಪ ವಿಶೇಷಾಧಿಕಾರಿ ಕೆ.ರಮ್ಯ, ಕಾರ್ಯಾಧ್ಯಕ್ಷದ ಡಿ.ಎಂ.ರಾಣಿ, ಕಾರ್ಯದರ್ಶಿ ಡಾ.ಪುಷ್ಪ ಇದ್ದರು.