ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.31: ಜೆಡಿಎಸ್ ಪಕ್ಷ ಜಾತಿಗೆಟ್ಟಿದೆ ಎಂದು ಕೀಳು ಅಭಿರುಚಿಯ ಟೀಕೆ ಮಾಡಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಕಾಮಾಲೆ ಕಾಂಗ್ರೆಸ್ ಎಂದು ಮೂದಲಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.
ಕಾಂಗ್ರೆಸ್ ಕುಟಿಲತೆ, ಕಪಟತನದ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದೆ. ಕೈ ಕೊಡುವ ಚಾಳಿ ಕಾಂಗ್ರೆಸ್ ಪಕ್ಷದ ಜನ್ಮಕ್ಕೆ ಅಂಟಿದ ಆಜನ್ಮ ಜಾಡ್ಯ. ಒಳಗೊಂದು ಮುಖ, ಹೊರಗೊಂದು ಮುಖವುಳ್ಳ ಮುಖೇಡಿ ಪಕ್ಷವೇ ಕಾಂಗ್ರೆಸ್. ಅಂಥ ಕಾಂಗ್ರೆಸ್, ಚುನಾವಣೆ ಹೊತ್ತಿಗೆ ಸುಳ್ಳುಗಳ ಸರಮಾಲೆಯನ್ನೇ ಪೋಣಿಸುತ್ತಿದೆ ಎಂದು ದೂರಿದ್ದಾರೆ.
ಪ್ರಧಾನಿಯಾಗಿದ್ದ ಕನ್ನಡದ ಹೆಮ್ಮೆಯ ಪುತ್ರನನ್ನು ಕೆಳಗೆಳೆದ ಕಿರಾತಕ ಪಕ್ಷ, ಜಾತ್ಯತೀತತೆ ಎನ್ನುತ್ತಲೇ ಜಾತಿಗಳ ನಡುವೆ ಕಿಚ್ಚಿಟ್ಟ ಸೋಗಲಾಡಿ ಪಕ್ಷ, ಅಹಿಂದ ಎನ್ನುತ್ತಲೇ ಬಿಜೆಪಿ ಹಿಂದೆಬಿದ್ದು ಬೇಳೆ ಬೇಯಿಸಿಕೊಳ್ಳುತ್ತಿರುವ ಪಕ್ಷ; ಅಂಥ ಕಳಂಕಿತ ಪಕ್ಷ ಜಾತ್ಯತೀತ ಜನತಾದಳದ ಜಾತ್ಯತೀತತೆ ಬಗ್ಗೆ ಕೀರಲು ದನಿಯಲ್ಲಿ ಕಿರುಚುತ್ತಿದೆ. ಇಡೀ ದೇಶದ ಉದ್ದಗಲಕ್ಕೂ ಜಾತ್ಯತೀತ ಪಕ್ಷಗಳ ಮಾರಣಹೋಮ ನಡೆಸಿ, ಈಗ ಅಳಿವು ಉಳಿವಿಗಾಗಿ ಅದೇ ಪ್ರಾದೇಶಿಕ ಪಕ್ಷಗಳ ಬಾಲವಾಗಿ ಉಸಿರಾಡುತ್ತಿದೆ ಕಾಂಗ್ರೆಸ್. ಇನ್ನೂ ಹಳೆಯ ಅಮಲಿನಲ್ಲಿಯೇ ತೇಲುತ್ತಿದೆ ಆ ಪಕ್ಷಕ್ಕೆ ವರ್ತಮಾನದ ವರ್ತನೆಯ ಅರಿವೇ ಇಲ್ಲ ಎಂದು ಅವರು ಟೀಕಿಸಿದ್ದಾರೆ.
ಈ ಕಾಂಗ್ರೆಸ್ ಮಹಾತ್ಮ ಗಾಂಧೀಜಿ ಅವರ ಕಾಲದ ಕಾಂಗ್ರೆಸ್ ಅಲ್ಲ, ಅಧಿಕಾರಕ್ಕಾಗಿ ಎಲ್ಲ ಅಡ್ಡದಾರಿ ಹಿಡಿದ ಪಕ್ಷ ಈ ಕಾಂಗ್ರೆಸ್, ಕಾಲಚಕ್ರಕ್ಕೆ ಸಿಲುಕಿ ಕೊರಗುತ್ತಾ ನೀತಿಗೆಟ್ಟ, ಲಜ್ಜೆಗೆಟ್ಟ, ಮತಿಗೆಟ್ಟ ಕಾಂಗ್ರೆಸ್, ಕರ್ನಾಟಕದಲ್ಲಿ ಮತಗೇಡಿ ಬಿಜೆಪಿಯ ಬಾಲಂಗೋಚಿ ಆಗಿರುವುದು ಸುಳ್ಳಾ? ಎಂದು ಪ್ರಶ್ನಿಸಿದ್ದಾರೆ.
2018ರಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರಕಾರದ ಹತ್ಯೆಗೆ ಸುಪಾರಿ ಸ್ವೀಕರಿಸಿದ ‘ಸುಪಾರಿ ಸಿದ್ದಪುರುಷರು’ ಯಾವ ಪಕ್ಷದವರು? ಕಲಾಪದಲ್ಲಿ ವೀರಾವೇಶ, ಕಲಾಪದಿಂದ ಕಾಲು ಹೊರಗಿಟ್ಟ ತಕ್ಷಣ ಅದು ಸಶೇಷ!! ಇದಲ್ಲವೇ ಸ್ವಯಂ ಘೋಷಿತ ಸೆಕ್ಯೂಲರ್ ಪಕ್ಷದ ಭೂಷಣ? ಸತ್ಯವನ್ನೇ ಕೊಲ್ಲುವ ಹುಂಬತನ ಏಕೆ? 2008ರ ಆಪರೇಷನ್ ಕಮಲದ ಉಪ ಚುನಾವಣೆ. ಕಾಂಗ್ರೆಸ್ ಅನ್ನು ಹಳ್ಳ ಹಿಡಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷ ಸ್ಥಾನದಿಂದ ಹೊರದಬ್ಬಲು ಯಡಿಯೂರಪ್ಪ ಅವರ ಜತೆ ನೇರ ಡೀಲಿಗಿಳಿದು ಕೋಟಿ ಕೋಟಿ ಸುಪಾರಿ ಪಡೆದು ಇಡಗಂಟು ಮಾಡಿಕೊಂಡವರ ಬಗ್ಗೆ ಕಾಂಗ್ರೆಸ್ ಅಸಹನೀಯ ಮೌನವೇಕೆ? ಆಗ ಎಲ್ಲಿತ್ತು ಜಾತ್ಯತೀತತೆ? ಆ ದಲಿತ ನಾಯಕ ಮಾಡಿದ ಅನ್ಯಾಯವೇನು? ಎಂದು ಪ್ರಶ್ನಿಸಿದ್ದಾರೆ.
ಧರ್ಮ, ಜಾತಿಗಳ ನಡುವೆ ವೈಷಮ್ಯದ ವಿಷಬೀಜ ಬಿತ್ತಿದ, ಹಗರಣಗಳಲ್ಲಿ ಮುಳುಗೇಳುತ್ತಿರುವ ಕಡುಕೆಟ್ಟ ಭ್ರಷ್ಟ ಈ ರಾಜ್ಯ ಬಿಜೆಪಿ ಸರಕಾರ ಬರಲು ಕಾರಣರು ಯಾರಯ್ಯ? ಮೇಲೆ ಮಾತ್ರ ಜಾತ್ಯತೀತ, ಒಳಗೆ ಮಾತ್ರ ಎಲ್ಲಕ್ಕೂ ಅತೀತ! ಇದು ಯಾವ ಸೀಮೆಯ ತತ್ತ್ವ ಸಿದ್ದಾಂತ? ಇನ್ನೆಷ್ಟು ದಿನ ಈ ಟೋಪಿ ರಾಜಕಾರಣ? ರಾಜಕೀಯದಲ್ಲಿ ಕಳ್ಳ ಸಂಸಾರ ಎನ್ನುವುದು ಕಾಂಗ್ರೆಸ್ ಪಕ್ಷದ ಆವಿಷ್ಕಾರ. ಅಷ್ಟೇ ಅಲ್ಲ, ಇನ್ನೊಬ್ಬರ ಕಳ್ಳ ಸಂಸಾರಕ್ಕೆ ಕೀಲಿ ಕೊಟ್ಟು ಮನೆಮುರುಕ ಕೆಲಸ ಮಾಡುವುದೂ ಕಾಂಗ್ರೆಸ್ ಖಯಾಲಿ. ಕರ್ನಾಟಕದಲ್ಲಿ ಬಿಜೆಪಿ- ಕಾಂಗ್ರೆಸ್ ಭಾಯಿ ಭಾಯಿ; ಇದೇ ಸತ್ಯ. ಅಲ್ಲ ಎನ್ನುವ ಅಚಲ ನೈತಿಕತೆ ಆ ಪಕ್ಷಕ್ಕೆ ಇದೆಯಾ? ಎಂದು ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿದ್ದಾರೆ.