ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.2: ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.
ಯಶವಂತಪುರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ವಿಚಾರದ ಬಗ್ಗೆ ಕಿಡಿಕಾರಿದರಲ್ಲದೆ ಅಂತಹ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರಿಗೆ ಧಮ್ಕಿ, ಕಿರುಕುಳ ಕೊಡುವುದು ಆಗ್ತಿದೆ. ಚುನಾವಣೆ ಬಂದಾಗಿನಿಂದ ಅದು ಜಾಸ್ತಿಯಾಗಿದೆ. ಬೇರೆ ಪಕ್ಷದಿಂದ ಬೇಸತ್ತು ನಮ್ಮ ಪಕ್ಷಕ್ಕೆ ಬರುವವರನ್ನು ಕೆಲ ಕಡೆ ಪೋಲಿಸರ ಮಧ್ಯಸ್ಥಿಕೆಯಲ್ಲಿ ಹೆದರಿಸಿ ಅವರನ್ನು ಪುನಾ ಅದೇ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಎಂದು ಅವರು ಹೇಳಿದರು.
ನಾನು ಪೋಲಿಸರಿಗೆ ಎಚ್ಚರಿಕೆ ಕೊಡುತ್ತೇನೆ. ಇನ್ನೊಂದು ತಿಂಗಳು ಅಷ್ಟೇ ನಿಮ್ಮ ಸಮಯ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಶಾಸಕರಿಗೆ ಅಡಿಯಾಳಾಗಿ ಕೆಲಸ ಮಾಡಿದರೆ ಜೂನ್ ತಿಂಗಳ ಬಳಿಕ ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.
ರಾಜ್ಯದ ಜನತೆಯ ಹಣದಿಂದ ನೀವು ಕೆಲಸ ಮಾಡ್ತಿದ್ದೀರಿ ಅನ್ನೋದನ್ನ ಅಧಿಕಾರಿಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಾನೂ ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಎಂದೂ ಇಂಥ ದ್ವೇಷದ ರಾಜಕೀಯಕ್ಕೆ ಪ್ರೋತ್ಸಾಹ ಕೊಟ್ಟಿಲ್ಲ. ಅಧಿಕಾರಿಗಳು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ಎಚ್ಚರಿಕೆ ನೀಡಿದರು.
ನನ್ನ ಪಕ್ಷವನ್ನು ಹಾಳು ಮಾಡಿಕೊಳ್ಳಬೇಕಾ?
ಒಬ್ಬರನ್ನು ತುಳಿಯಲು ಇನ್ನೊಬ್ಬರನ್ನು ಬೆಳೆಸುತ್ತಾರೆ ಎಂಬ ನಾರಾಯಣಗೌಡರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ನಾರಾಯಣಗೌಡರನ್ನು ಬೆಳೆಸೋಕೆ ನನ್ನ ಪಕ್ಷವನ್ನು ಹಾಳು ಮಾಡಿಕೊಳ್ಳಬೇಕಾ? ಇವರು ಮಹಾನ್ ಕೆಲಸ ಮಾಡಿದ್ದಾರೆ ಅಂತ ಹೇಳಿ ನಾನು ಅಭ್ಯರ್ಥಿ ಹಾಕದೇ ಇರಲಾ? ಕೃಷ್ಣ ವಿರುದ್ದ ಅಭ್ಯರ್ಥಿ ಆಗಬೇಕು ಅಂತ ಬಂದಾಗ ಅವತ್ತು ಈ ಪರಿಜ್ಞಾನ ಇರಲಿಲ್ಲವಾ ಇವರಿಗೆ? ಕೃಷ್ಣ ವಿರುದ್ದ ಅಭ್ಯರ್ಥಿ ಆಗೋಕೆ ಯಾಕೆ ಬಂದರು ಇವರು. ಎರಡನೇ ಬಾರಿ ನಿನಗೆ ಟಿಕೆಟ್ ಕೊಡಬಾರದು ಅಂತ ಇದ್ದಿದ್ದು. ಆದರೂ ಟಿಕೆಟ್ ಕೊಟ್ಟೆವು. ನಾನು ಟಿಕೆಟ್ ಕೊಡಿಸಿದ್ದು ನಾನು. ಕುತ್ತಿಗೆ ಕೊಯ್ದು ಹೋದವನು ಈ ವ್ಯಕ್ತಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಅಭ್ಯರ್ಥಿಗಳಿಗೆ ಕುಮಾರಸ್ವಾಮಿ ಆನ್ಲೈನ್ ಟಿಪ್ಸ್
ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.2: ರಾಜ್ಯ ವಿಧಾನಸಭೆ ಚುನಾವಣೆ ಸಿದ್ಧತೆಯ ಭಾಗವಾಗಿ ಶನಿವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಎಲ್ಲ ಶಾಸಕರು, ಅಭ್ಯರ್ಥಿಗಳಿಗೆ ಆನ್ಲೈನ್ ವೇದಿಕೆಯ ಮಹತ್ವದ ಟಿಪ್ಸ್ ನೀಡಿದರು.
ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಜೆಪಿ ನಗರದ ತಮ್ಮ ನಿವಾಸದಿಂದಲೇ ಸಭೆ ನಡೆಸಿದ ಅವರು, ಕೆಲ ಅಭ್ಯರ್ಥಿಗಳಿಗೆ ಚಾಟಿ ಬೀಸಿದರು. ಅಲ್ಲದೆ, ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು ಹಾಗೂ ಗೆಲುವಿನ ಅವಕಾಶ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಪಕ್ಷದ ಕಚೇರಿಯಿಂದ ಬರುವ ಸೂಚನೆಗಳನ್ನು ಪಾಲಿಸಲು ಸೂಚನೆ ನೀಡಿದ ಮಾಜಿ ಮುಖ್ಯಮಂತ್ರಿಗಳು, ಮತದಾನಕ್ಕೆ ಇನ್ನೂ 37 ದಿನ ಇದೇ, ಇದು ನಿಮಗೆಲ್ಲ ಅಗ್ನಿಪರೀಕ್ಷೆ. ಕ್ಷೇತ್ರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಿ. ಕಾರ್ಯಕರ್ತರು, ಮುಖಂಡರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ಎಂದು ಅಭ್ಯರ್ಥಿಗಳಿಗೆ ತಿಳಿಸಿದರು ಅವರು.
ಪಂಚರತ್ನ ರಥಯಾತ್ರೆ ಯಶಸ್ವಿ ಆಗಿದೆ. ಮೈಸೂರಿನಲ್ಲಿ ಸಮಾರೋಪ ಸಮಾವೇಶ ಯಶಸ್ವಿ ಆಗಿದೆ. ಪಂಚರತ್ನ ಯೋಜನೆಗಳನ್ನು ಮನೆ ಮನೆಗೂ ತೆಗೆದುಕೊಂಡು ಹೋಗಿ. ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಿ ಎಂದು ಅಭ್ಯರ್ಥಿಗಳಿಗೆ ಸೂಚಿಸಿದರು.
ಇದೇ ವೇಳೆ ಅಭ್ಯರ್ಥಿಗಳ ಪ್ರಶ್ನೆಗಳಿಗೆ ಕುಮಾರಸ್ವಾಮಿ ಅವರು ಉತ್ತರ ನೀಡಿದರು