ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.17: ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಉಚ್ಚಾಟಿಸಿದ್ದಾರೆ ಎಂಬ ಪತ್ರವೊಂದು ಹರಿದಾಡಿ ಕೆಲ ಕಾಲ ಸಂಚಲನ ಉಂಟು ಮಾಡಿತ್ತು. ಬಳಿಕ ಇದು ನಕಲಿ ಪತ್ರ ಎಂದು ಸಿ.ಎಂ. ಇಬ್ರಾಹಿಂ ಸ್ಪಷ್ಟನೆ ನೀಡಿದ್ದಾರೆ.
ಸಿ.ಎಂ.ಇಬ್ರಾಹಿಂ ಅವರ ನಕಲಿ ಸಹಿಯನ್ನು ಒಳಗೊಂಡಿರುವ ಈ ಪತ್ರದಲ್ಲಿ, “ಜೆಡಿಎಸ್ ಪಕ್ಷ ದಶಕಗಳಿಂದ ಜಾತ್ಯತೀತ ಸಿದ್ಧಾಂತವನ್ನು ಪಾಲಿಸುತ್ತಾ ಬಂದಿದೆ. ನಮ್ಮ ಪಕ್ಷದಲ್ಲಿ ಎಲ್ಲ ಜಾತಿ ಧರ್ಮಗಳ ನಾಯಕರು ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ. ಇತ್ತೀಚೆಗೆ ಜೆಡಿಎಸ್ ಶಾಸಕಾಂಗ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿಯಾಗಿರುವುದು ಕಂಡು ಬಂದಿದ್ದು ಈ ತತ್ ಕ್ಷಣದಿಂದ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಲು ಪಕ್ಷ ತೀರ್ಮಾನಿಸಿದೆ” ಎಂದು ಬರೆಯಲಾಗಿತ್ತು. ಆದರೆ ಈ ಸುದ್ದಿಯನ್ನು ಸಿಎಂ ಇಬ್ರಾಹಿಂ ತಳ್ಳಿಹಾಕಿದ್ದಾರೆ.
‘ಈ ರೀತಿಯ ಯಾವುದೇ ನಿರ್ಧಾರವನ್ನು ಪಕ್ಷವು ತೆಗೆದುಕೊಂಡಿಲ್ಲ. ಇದರಿಂದ ನನಗೆ ಮತ್ತು ಪಕ್ಷಕ್ಕೆ ಮುಜುಗರ ಉಂಟಾಗಿದೆ. ಇಂತಹ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು,’ ಎಂದು ಸಿಎಂ ಇಬ್ರಾಹಿಂ ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ನಲ್ಲಿ ಸಿಎಂ ಇಬ್ರಾಹಿಂ ಹಾಗೂ ಎಚ್ಡಿ ಕುಮಾರಸ್ವಾಮಿ ನಡುವೆ ತಿಕ್ಕಾಟ ನಡೆಯುತ್ತಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬಾರದೆಂದು ಸಿ.ಎಂ. ಇಬ್ರಾಹಿಂ ಬಣ ಅಭಿಪ್ರಾಯಪಟ್ಟಿದೆ.