ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.24: ಕುಣಿಯಲಾರದವರಿಗೆ ನೆಲ ಡೊಂಕು ಎಂದು ಟೀಕೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕುಣಿಯಲಾರದನಿಗೆ ನೆಲ ಡೊಂಕು ಎಂಬ ಮಾತೇನು ಸರಿ, ಕುಣಿಯಲು ಬಿಟ್ಟು ನೆಲ ಅಗೆಯುವ ಮೈತ್ರಿ ದ್ರೋಹಕ್ಕೆ ಏನು ಹೇಳುವುದು ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದ್ದಾರೆ.
ವಿಜಯದಶಮಿ ದಿನವಾದ ಇಂದು ಬೆಳಿಗ್ಗೆಯೇ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ದೋಖಾ ಮಾಡುವುದೇ ದುರುದ್ದೇಶವಾಗಿದ್ದಾಗ ನೆಲವನ್ನು ಡೊಂಕು ಮಾಡುವುದು ಕಷ್ಟವೇ, ಮೀರ್ ಸಾಧಿಕನ ಆಧುನಿಕ ಅವತಾರಿಯಾಗಿರುವ ನಿಮಗೆ ಇಂಥ ಶುದ್ರ ವಿದ್ಯೆಗಳೆಲ್ಲ ಕರತಲಮಲಕ. ಕುಮಾರಸ್ವಾಮಿ ಸರ್ಕಾರವನ್ನು ತೆಗೆದಿದ್ದು ನಾನೇ ಎಂದು ಹೇಳಲು ನಿಗಮ ಗುಂಡಿಗೆ ಸಾಲದೇ, ನೇರವಾಗಿ ಸತ್ಯ ಹೇಳಲು ಭಯವೇ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಿದ್ದವನದಲ್ಲಿ ಹೆಣೆದ ಸಿದ್ದ ಸೂತ್ರ ನನಗೆ ಗೊತ್ತಿಲ್ಲದ ಚಿದಂಬರ ರಹಸ್ಯವಲ್ಲವೇ, ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಅನ್ಯರಿಗೆ ಕಾಣದು ಎನ್ನುವಷ್ಟು ಕಿಲಾಡಿತನವೇ ಅಥವಾ ಕಿಡಿಗೇಡಿತನವೋ ಎಂದು ವ್ಯಂಗ್ಯವಾಡಿರುವ ಕುಮಾರಸ್ವಾಮಿ, ಇಂಥ ಸಿದ್ದ ಲೀಲೆಗಳು ನಮಗೇನೂ ಹೊಸತಲ್ಲ. ನನ್ನ ಸಂಪುಟದಲ್ಲಿ ಸಚಿವರಾಗಿದ್ದವರಿಗೆ ಹಂಚಿಕೆಯಾಗಿದ್ದ ಬಂಗಲೆ ಸೇರಿಕೊಳ್ಳುವುದು ಸಮಾಜವಾದಿಗೆ ಅದೆಂತಹ ಸಭ್ಯತೆ, ಅದೆಂತ ಶೋಭೆ ಎಂದು ವ್ಯಂಗ್ಯವಾಡಿದ್ದಾರೆ.
ವೆಸ್ಟೆಂರ್ಡ್ನಲ್ಲಿ ಇದ್ದ ಕಾರಣವನ್ನು ನಾನು ಈಗಾಗಲೇ ತಿಳಿಸಿದ್ದೇನೆ. ಆದರೆ ಜಾರ್ಜ್ ಮನೆಯಲ್ಲಿ ತಾವು ನಡೆಸಿದ ಸಿದ್ದ ಲೀಲೆಯನ್ನು ಬಹಿರಂಗ ಮಾಡುವಿರಾ, ನಿಮ್ಮ ಅಂತರಂಗವನ್ನು ಒಮ್ಮೆಯಾದರೂ ಬಹಿರಂಗ ಮಾಡಿ ಸಿದ್ದರಾಮಯ್ಯನವರೇ ಎಂದು ಕುಮಾರಸ್ವಾಮಿ ಟ್ವೀಟ್ನಲ್ಲಿ ಹೇಳಿದ್ದಾರೆ.