ಸುದ್ದಿಮೂಲ ವಾರ್ತೆ
ತಿಪಟೂರು, ಸೆ. 11 : ಆರೋಗ್ಯಕ್ಕಿಂತ ಮತ್ತೊಂದು ಆಸ್ತಿ ಇಲ್ಲ. ಆರೋಗ್ಯ ಹದಗೆಟ್ಟಾಗ ವೈದ್ಯರೇ ದೇವರು ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ನೊಣವಿನಕೆರೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ಆಸ್ಪತ್ರೆ, ಕುಮಾರ ಆಸ್ಪತ್ರೆ, ಶ್ರೀರಂಗ ಆಸ್ಪತ್ರೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಎಲ್ಲಾ ಖಾಯಿಲೆಗಳ ಉಚಿತ ತಪಾಸಣೆ, ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ಜೀವನಶೈಲಿ ಬದಲಾವಣೆಯಾಗಿದ್ದು ಯಾವ ಸಮಯದಲ್ಲಾದರೂ ರೋಗ ದೇಹವನ್ನು ಆಕ್ರಮಿಸಿಕೊಳ್ಳಬಹುದು. ಆರೋಗ್ಯದ ಸ್ವಾಸ್ಥ್ಯವಿಲ್ಲದ ಜೀವನ ಸಾಧನೆಗೆ ಅಡ್ಡಿಯಾಗುತ್ತದೆ. ಆರೋಗ್ಯದಿಂದ ನೆಮ್ಮದಿ ಮತ್ತು ಸುಂದರ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತದೆ ಎಂದರು.
ದಸರಿಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ಈ ತಾಲ್ಲೂಕಿನಲ್ಲಿ ಶ್ರೀಧರ್ ಮತ್ತು ವಿವೇಚನ್ ವೈದ್ಯರುಗಳು ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಹೃದಯ ಸಂಬಂಧಿ ಖಾಯಿಲೆಗಳಿದ್ದರೆ ವಿವೇಚನ್ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.
ಕುಮಾರ್ ಆಸ್ಪತ್ರೆ ಡಾ. ಶ್ರೀಧರ್ ಮಾತನಾಡಿ, ಜನರು ಒತ್ತಡ ಮರೆತು ನೆಮ್ಮದಿಯ ಸಂತಸದ ಜೀವನ ನಡೆಸಿ ಪರೋಪಕಾರ ಭಾವನೆ ಬಂದಾಗ ಉತ್ತಮ ಆರೋಗ್ಯ ನಿಮ್ಮದಾಗಿರುತ್ತದೆ ಎಂದರು.
ಆರೋಗ್ಯ ಶಿಬಿರದಲ್ಲಿ 2 ಸಾವಿರಕ್ಕೂ ಅಧಿಕ ಜನರು ನೋಂದಣಿಯಾಗಿ ಉಚಿತ ನುರಿತ 40ಕ್ಕೂ ಅಧಿಕ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರು.