ಸುದ್ದಿಮೂಲ ವಾರ್ತೆ
ಮೈಸೂರು, ಜು.7:ರಾಜ್ಯದಲ್ಲಿ ರಾಜಕೀಯ ತೆವಲಿಗಾಗಿ ಅಮಾಯಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಈ ಬಗ್ಗೆ ಕ್ರಮಕೈಗೊಳ್ಳಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದರು
ವರ್ಗಾವಣೆಗೆ ಬೇಸತ್ತು ಮಂಡ್ಯ ಜಿಲ್ಲೆ ನಾಗಮಂಗಲದ ರಸ್ತೆ ಸಾರಿಗೆ ಸಂಸ್ಥೆ ಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುರುವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಚಾಲಕನ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಗದೀಶ್ ಸದ್ಯ ವೆಂಟಿಲೇಟರ್ನಲ್ಲಿ ಇದ್ದಾರೆ. ಸರ್ಕಾರ ಬಂದು ಐವತ್ತು ದಿನ ಆಗಿಲ್ಲ. ವರ್ಗಾವಣೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ. ಆದರೆ, ಈ ರೀತಿ ಮಾಡುವುದು ಸರಿಯಲ್ಲ. ಜಗದೀಶ್ ಪತ್ನಿ ಪಂಚಾಯ್ತಿ ಸದಸ್ಯೆ. ಗ್ರಾಮದ ಮಹದೇವ ಎಂಬ ರೌಡಿ ಜಗದೀಶ್ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಈ ಹೆಣ್ಣು ಮಗಳು ಜೆಡಿಎಸ್ ಬಿಡುವಂತೆ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾನೆ ಎಂದು ಕಿಡಿಕಾರಿದರು.
ಮತ್ತೊಂದೆಡೆ ಜಗದೀಶ್ ಗೆ ಅಧಿಕಾರಿಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಡೆತ್ ನೋಟ್ನಲ್ಲಿ ಜಗದೀಶ್ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ಸಚಿವರ ಆದೇಶ ಇದೆ, ಒತ್ತಡ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿ. ಮಂತ್ರಿ ಸ್ಥಾನ ಏನು ಶಾಶ್ವತನಾ? ಘಟನೆ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಇನ್ನೂ ವ್ಯಕ್ತಿ ಸತ್ತಿಲ್ಲ, ಆ ಕಾರಣಕ್ಕೆ ಎಫ್ಐಆರ್ ದಾಖಲಿಸಿಲ್ಲ ಎನ್ನುತ್ತಾರೆ. ಇವರಿಗೆ ಮತ ಹಾಕಿದ್ದು ಜನರ ಜೀವದ ಜೊತೆ ಚೆಲ್ಲಾಟ ಆಡಲು ಅಲ್ಲ ಎಂದು ವಾಗ್ದಾಳಿ ನಡೆಸಿದರು.