ಸುದ್ದಿಮೂಲ ವಾರ್ತೆ
ಹೊಸಕೋಟೆ,ಜೂ.23 : ಮನುಷ್ಯನಿಂದ ಮನುಷ್ಯನಿಗೆ ಹರಡುವಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗುವುದು ಅತ್ಯವಶ್ಯಕ, ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ ಎಂದು ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಗುರುರಾಜ್ ತಿಳಿಸಿದರು.
ನಗರದ 39ನೇ ಬಿಎಂಟಿಸಿ ಘಟಕದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಲಾರ್ವ ಸಮೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಳೆಗಾಲದ ಸಮಯದಲ್ಲಿ ಕೀಟಜನ್ಯ ರೋಗಗಳಾದ ಡೆಂಘಿ, ಚಿಕನ್ ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆಯನ್ನು ಆರೋಗ್ಯ ಇಲಾಖೆ ವಹಿಸಿದೆ. ಆದರ ಭಾಗವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಆದ್ದರಿಂದ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವಂಹವರು ಸಾಂಕ್ರಾಮಿಕ ರೋಗಗಳ ಮುನ್ಸೂಚನೆ ಬಂದಾಗ ಯಾವುದೇ ಕಾರಣಕ್ಕೂ
ನಿರ್ಲಕ್ಷ್ಯ ಮಾಡದೆ ತ್ವರಿತವಾಗಿ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮೇಲ್ವಿಚಾರಕ ನಟರಾಜು ಮಾತನಾಡಿ, ಬಿಎಂಟಿಸಿ ಸಿಬ್ಬಂದಿಗಳು ಪ್ರತಿ ನಿತ್ಯ ಸಾವಿರಾರು ಜನರ ಮಧ್ಯೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಸಾಂಕ್ರಾಮಿಕ ರೋಗಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಒಬ್ಬರಿಂದ ಒಬ್ಬರಿಗೆ ಹರಡುವ ಮಲೇರಿಯಾ, ಡೆಂಗ್ಯೂ ಜ್ವರದ ಬಗ್ಗೆ ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳಿ ಎಂದರು.
ತೀವ್ರತರ ಲಾರ್ವ ಸಮೀಕ್ಷೆ ನಡೆಸಿ ಲಾರ್ವ ಕಂಡು ಬಂದ ಸ್ಥಳಗಳಲ್ಲಿ ಸ್ವಚ್ಚಗೊಳಿಸಿ. ಟಾಮಿಫಾಸ್ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಿ ಲಾರ್ವ ನಿರ್ಮೂಲನೆ ಮಾಡಿ ಘಟಕದ ರೋಗವಾಹಕ ನಿಯಂತ್ರಣದ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಯಿತು
ಈ ಸಂಧರ್ಭದಲ್ಲಿ ಬಿಎಂಟಿಸಿ ಘಟಕದ ವ್ಯವಸ್ಥಾಪಕ ಸೋಮಶೇಖರ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ನಟರಾಜು, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಪ್ಪ ಇದ್ದರು.