ಸುದ್ದಿಮೂಲ ವಾರ್ತೆ
ಮೈಸೂರು, ಮೇ 31: ಮುಂಗಾರು ಪೂರ್ವ ಮಳೆ ನಗರ ಪ್ರದೇಶಕ್ಕಿಂತಲೂ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಸುರಿಯುತ್ತಿದೆ. ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಸಿಡಿಲು, ಗಡುಗು, ಬಿರುಗಾಳಿ ಸಹಿತದ ಬಿರುಸಿನ ಮಳೆಗೆ ಮಂಗಳವಾರ ರಾತ್ರಿ ಮೂರು ಜಾನುವಾರುಗಳು ಬಲಿಯಾಗಿದ್ದು, ಐದು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮನೆ-ಮಳಿಗೆಗಳಿಗೆ ನೀರು ನುಗ್ಗಿದೆ, ಅಲ್ಲಲ್ಲಿ ಮರಗಳು ಉರುಳಿವೆ.
ಸಿಡಿಲಿಗೆ ಹನಗೋಡಿನ ನಾಗೇಗೌಡರಿಗೆ ಸೇರಿದ ಹೋರಿ, ನಾಸೀರ್ ಪಾಷಾರ ಹಸು, ಮುದಗನೂರಿನ ಸೂರೇಗೌಡರ ಹಸು ಬಲಿಯಾಗಿದ್ದು, ಸುಮಾರು 2 ಲಕ್ಷ ರು. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಮೇಯಲು ಬಿಟ್ಟಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾಗೂ ಡಾ.ದರ್ಶನ್ ಸಾವನ್ನಪ್ಪಿದ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಗ್ರಾಮಲೆಕ್ಕಾಧಿಕಾರಿ ಕರಿಬಸಪ್ಪ ಭೇಟಿ ನೀಡಿ ಪರಿಶೀಲಿಸಿ ಹಾನಿ ಬಗ್ಗೆ ವರದಿ ಸಲ್ಲಿಸಿದ್ದಾರೆ.
ಹನಗೋಡು ಸರ್ಕಲ್ ಬಳಿಯ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ವಾಹನದ ಮೇಲೆ ಮರದ ಕೊಂಬೆ ಬಿದ್ದು ಆಕ್ಸಲ್ ತುಂಡಾಗಿದ್ದು, ವಾಹನದ ಬಾಡಿ ಜಖಂಗೊಂಡಿದೆ.ಶ್ರೀ ಆಂಜನೇಯ ದೇವಾಲಯದ ಬಳಿಯ ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿದೆ.
ಗುರುಪುರದ ಜಯಮ್ಮರ ಜಮೀನಿನಲ್ಲಿದ್ದ ಬೃಹತ್ ಮರ ವಿದ್ಯುತ್ ಲೈನ್ ಮೇಲೆ ಬಿದ್ದು, ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರೆ, ಹನಗೋಡಿನಲ್ಲೂ ಸಹ ಮೂರು ಕಂಬಗಳು ಮುರಿದು ಬಿದ್ದಿದ್ದು ಚೆಸ್ಕಾಂ ಸಿಬ್ಬಂದಿಗಳು ದುರಸ್ತಿ ಕೈಗೊಂಡಿದ್ದಾರೆಂದು ಎಇಇ ಸಿದ್ದಪ್ಪ ಮಾಹಿತಿ ನೀಡಿದ್ದಾರೆ. ಇನ್ನು ಹಾರಂಗಿ ನಾಲೆಯಲ್ಲಿ ಗ್ರಾಮದ ವಿವಿಧ ಬಡಾವಣೆಯ ಅಪಾರ ಪ್ರಮಾಣದ ಚರಂಡಿ ನೀರು ಹರಿದು ಜನ ಸಂಚಾರ ಅಸ್ತವ್ಯಸ್ತವಾಗಿತ್ತು.