ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.12: ಹಾಲು ಉತ್ಪಾದಕರಿಗೆ ಸರಕಾರ ಮತ್ತು ಬಮೂಲ್ ವತಿಯಿಂದ ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಿ ಆರ್ಥಿಕ ಮಟ್ಟ ಉತ್ತಮ ಪಡಿಸುವ ದಿಸೆಯತ್ತ ಮುನ್ನಡೆಯುತ್ತಿದೆ ಎಂದು ಬಮೂಲ್ ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಡಾ. ಶಿವಾಜಿನಾಯಕ್ ತಿಳಿಸಿದರು.
ತಾಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾ.ಪಂ ವ್ಯಾಪ್ತಿಯ ಹೆಡಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ 2022-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯ ಕಾರ್ಯಕ್ರಮ ಕುರಿತು ಮಾತನಾಡಿದರು.
ಕೃಷಿಕರು ಹೈನುಗಾರಿಕೆಯನ್ನು ಹೆಚ್ಚು ತೊಡಗಿಸಿಕೊಳ್ಳುವುದರಿಂದ ಹೈನೋದ್ಯಮ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗುತ್ತದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಸಂಘವು 5.23 3.86 ಲಕ್ಷ ರೂ. ನಿವ್ವಳ ಲಾಭದಲ್ಲಿದ್ದು, ಉತ್ಪಾದಕರಿಗೆ ಶೇ. 3.78 ರಷ್ಟು ಬೋನಸ್ ವಿತರಿಸಲಾಗುವುದು. ರೈತರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಹೊಸಕೋಟೆ ಶಿಬಿರದ ಮಾರ್ಗ ವಿಸ್ತಾರಣಾಧಿಕಾರಿ ಆನಂದ್ ಮಾತನಾಡಿ, ಹಾಲು ಉತ್ಪಾದಕರಿಗೆ ಹಾಗೂ ರಾಸುಗಳಿಗೆ ಬಮೂಲ್ ವತಿಯಿಂದ ವಿಮಾ ಯೋಜನೆ ಕಡ್ಡಾಯವಾಗಿರುತ್ತದೆ. ಗುಣಮಟ್ಟದ ಹಾಲನ್ನು ಪಡೆಯಲು ರಾಸುಗಳಿಗೆ ಒಳ್ಳೆಯ ಪೌಷ್ಟಿಕಾಂಶ ಭರಿತ ಆಹಾರವನ್ನು ನೀಡುವುದಲ್ಲದೇ ರೋಗಗಳು ಬಾರದಂತೆ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾರ್ಗ ವಿಸ್ತರಣಾಧಿಕಾರಿ ಆನಂದ್, ಎಂಪಿಸಿಎಸ್ ಅಧ್ಯಕ್ಷ ಹೆಚ್.ಜಿ. ರಾಜೇಶ್, ಉಪಾಧ್ಯಕ್ಷ ಮಂಜುನಾಥ್ ಹೆಚ್.ಸಿ, ನೆಲವಾಗಿಲು ಎಸ್ಎಫ್ಸಿಎಸ್ ಅಧ್ಯಕ್ಷ ಎಸ್.ಮಂಜುನಾಥ್, ಮಾಜಿ ಅಧ್ಯಕ್ಷರಾದ ಎನ್.ಚಂದ್ರಪ್ಪ, ಎಂ.ರಾಜಣ್ಣ, ಹೆಚ್.ಎಸ್.ನಾರಾಯಣಸ್ವಾಮಿ, ಗ್ರಾಪಂ. ಸದಸ್ಯ ಎನ್.ಡಿ.ಬೈರೇಗೌಡ, ನಿರ್ದೇಶಕರಾದ ಹೆಚ್.ಎನ್. ಬೈರೇಗೌಡ, ಶ್ರೀನಿವಾಸ್, ಹೆಚ್.ಸಿ.ಬೈರೇಗೌಡ, ಮುನಿರಾಜು, ಸಂಗೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.