ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 30 : ಹುಲಿ ಉಗುರು ಪೆಂಡೇಂಟ್ ಪ್ರಕರಣ ಸಂಬಂಧ ನಟ ಜಗ್ಗೇಶ್ ಅವರ ಪರವಾಗಿ ಹೈಕೋರ್ಟ್ ಆದೇಶ ನೀಡಿದೆ. ಜಗ್ಗೇಶ್ ವಿರುದ್ಧ ಅರಣ್ಯಾಧಿಕಾರಿಗಳ ನೋಟಿಸ್ಗೆ ಹೈಕೋರ್ಟ್ ತಡೆ ನೀಡಿದೆ. ಇದರಿಂದ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತೆ ಆಗಿದೆ.
ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತೊಂದರೆ ಅನುಭವಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಿಂದ ಜಗ್ಗೇಶ್ಗೆ ನೋಟಿಸ್ ಕೂಡ ನೀಡಲಾಗಿತ್ತು. ಇದಕ್ಕೆ ತಡೆನೀಡಬೇಕು ಎಂದು ಜಗ್ಗೇಶ್ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಜಗ್ಗೇಶ್ ಪರವಾಗಿ ಕೋರ್ಟ್ ಆದೇಶ ನೀಡಿದೆ.
ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧದ ಕ್ರಮ ಕಾನೂನುಬಾಹಿರವೆಂದು ಜಗ್ಗೇಶ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದಿಸಿದರು. ವಾದವನ್ನು ಕೇಳಿದ ಬಳಿಕ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ. ಇದರಿಂದ ಜಗ್ಗೇಶ್ ಅವರು ನಿರಾಳರಾಗಿದ್ದಾರೆ.
ಅರಣ್ಯ ಇಲಾಖೆ ಕ್ರಮವನ್ನು ಜಗ್ಗೇಶ್ ಪ್ರಶ್ನೆ ಮಾಡಿದ್ದರು. ‘ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಮಾಡಬೇಕು. ನಾವು ಇದಕ್ಕೆ ಉತ್ತರಿಸುವ ಮೊದಲೇ 14 ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಸಂದರ್ಶನದಲ್ಲಿ ಹೇಳಿದ ಮಾತನ್ನು ಆಧರಿಸಿ ತೇಜೋವಧೆ ಮಾಡಲಾಗಿದೆ. ಅರಣ್ಯಾಧಿಕಾರಿಗಳ ಕ್ರಮವನ್ನು ಕಾನೂನುಬಾಹಿರವೆಂದು ಘೋಷಿಸಬೇಕು’ ಎಂಬುದಾಗಿ ಜಗ್ಗೇಶ್ ವಕೀಲರು ಅರ್ಜಿಯಲ್ಲಿ ಕೋರಿದ್ದರು.
ಜಗ್ಗೇಶ್ ಮನೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಜಗ್ಗೇಶ್ ಪತ್ನಿ ಪರಿಮಳಾ ಅವರು, ಪೂಜೆ ಮಾಡಿದ್ದ ಇಟ್ಟಿದ್ದ ಪೆಂಡೆಂಟ್ ಅನ್ನು ಅಧಿಕಾರಿಗಳಿಗೆ ನೀಡಿದ್ದರು.