ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.15: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ ಹಾಗೂ ಪುರಾತನ ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ನವೀಕರಣಗೊಳಿಸುವ ಯೋಜನೆಯನ್ನು ನೈರುತ್ಯ ರೈಲ್ವೆ ಇಲಾಖೆಯು ಕೈಗೆತ್ತಿಕೊಂಡಿದ್ದು, 2025ರೊಳಗೆ ಯಶವಂತಪುರ ರೈಲು ನಿಲ್ದಾಣವನ್ನು 377.86 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತು 480 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಟೌನ್ಮೆಂಟ್ ರೈಲು ನಿಲ್ದಾಣವನ್ನು ಉನ್ನತೀಕರಣಗೊಳಿಸಲು ತೀರ್ಮಾನಿಸಿದೆ.
ಬೆಂಗಳೂರು ನಗರದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲೊಂದಾದ ಯಶವಂತಪುರ ರೈಲ್ವೆ ನಿಲ್ದಾಣವು ಕಾರ್ಯಾರಂಭಿಸಿ ಹಲವು ವರ್ಷಗಳೇ ಕಳೆದೊಗಿದೆ. ಪ್ರತಿನಿತ್ಯ ಲಕ್ಷಾಂತರ ಜನ ಈ ರೈಲ್ವೆ ನಿಲ್ದಾಣಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಪ್ರಯಾಣಿಸುತ್ತಾರೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಧುನೀಕರಣ ಮೆರಗು ನೀಡಲು ನೈರುತ್ಯ ರೈಲ್ವೆ ಇಲಾಖೆ ಮುಂದಾಗಿದೆ. ಪ್ರಯಾಣಿಕರ ಅನುಕೂಲ ಹಾಗೂ ಅತ್ಯಾಧುನಿಕ ಮಾದರಿಯಲ್ಲಿ ನವೀಕರಣಗೊಳಿಸಲು ಸಜ್ಜಾಗಿದೆ.
ನೈರುತ್ವ ರೈಲ್ವೆ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಷ್ ಹೆಗ್ಡೆ ಈ ಕುರಿತು ಮಾಹಿತಿ ನೀಡಿ, ನೂತನವಾಗಿ ನವೀಕರಣಗೊಳ್ಳುವ ರೈಲು ನಿಲ್ದಾಣದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಒಳಗೊಂಡಂತೆ, 216 ಮೀಟರ್ ವಿಸ್ತಿರ್ಣದಲ್ಲಿ ಏರ್-ಕಾನ್ಕೋರ್ಸ್, ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು ಪ್ರತ್ಯೇಕ ಆಗಮನ, ನಿರ್ಗಮನ ದ್ವಾರಗಳು, ಉತ್ತಮ ಆಹಾರ ಒದಗಿಸುವ ಉಪಹಾರದ ಮಳಿಗೆಗಳು, ಮನರಂಜನೆ ಹಾಗೂ ನಾಡಿನ ಪ್ರವಾಸಿತಾಣಗಳ ಮಾಹಿತಿ ಒದಗಿಸುವ ಎಲ್.ಇ.ಡಿ ಸ್ಕ್ರೀನ್ ಅಳವಡಿಕೆ ಇರಲಿದೆ ಎಂದರು.
ವಿಶೇಷವಾಗಿ ತ್ಯಾಜ್ಯನೀರು ಹಾಗೂ ನೀರನ್ನು ಸಂರಕ್ಷಿಸಲು ಮಳೆ ನೀರು ಕೊಯ್ಲು ವ್ಯವಸ್ಥೆಕೂಡ ಈ ನವೀಕೃತ ರೈಲು ನಿಲ್ದಾಣ ಹೊಂದಿರಲಿದೆ. ನಿಲ್ದಾಣದೊಳಗೆ ನೈಸರ್ಗಿಕವಾಗಿ ಬೆಳಕು ಹಾಗೂ ಉತ್ತಮ ಗಾಳಿ ಬರುವಂತೆ ಕ್ರಮ ಕೈಗೊಳ್ಳಲಾಗಿದ್ದು, ವಾಹನಗಳ ದಟ್ಟಣೆ ಕಡಿತಕ್ಕೆ ಪ್ರತ್ಯೇಕ ಪಿಕ್-ಅಪ್ ಮತ್ತು ಡ್ರಾಪ್ ಪಾಯಿಂಟ್ಗಳನ್ನು ಈ ನಿಲ್ದಾಣ ಒಳಗೊಂಡಿರಲಿದೆ. ಅತ್ಯಾಧುನಿಕ ರೀತಿಯಲ್ಲಿ ನವೀಕರಣಗೊಳ್ಳುತ್ತಿರುವ ಈ ರೈಲು ನಿಲ್ದಾಣವನ್ನು ದಿವ್ಯಾಂಗ ಸ್ನೇಹಿ ಹಾಗೂ ಪ್ರಕೃತಿ ಸಂಪನ್ಮೂಲಗಳನ್ನು ಸಂರಕ್ಷಿಸುವ ಸಂದೇಶ ಸಾರುವ ‘ಹಸಿರು’ ಕಟ್ಟಡವಾಗಿ ವಿನ್ಯಾಸಗೊಳಿಸಲಾಗುತ್ತಿದೆ.
ಇದೇ ಮಾದರಿಯಲ್ಲಿ 480 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳ್ಳುತ್ತಿರುವ ಬೆಂಗಳೂರಿನ ಪುರಾತನ ದಂಡು ರೈಲು ನಿಲ್ದಾಣದಲ್ಲಿ ಕಾಮಗಾರಿ ಚುರುಕುಗೊಂಡಿದ್ದು, ಈ ರೈಲು ನಿಲ್ದಾಣವನ್ನೂ ಅತ್ಯಾಧುನಿಕ ಹಾಗೂ ಆಕರ್ಷಕ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಮುಂದಾಗಿದೆ ನೈರುತ್ಯ ರೈಲ್ವೆ ಇಲಾಖೆ. ಈ ನವೀಕೃತ ನಿಲ್ದಾಣವು 3 ಸಾವಿರದ 860 ಚದುರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿರಲಿದೆ.
ಪ್ರಯಾಣಿಕರ ಆಗಮನ ಹಾಗೂ ನಿರ್ಮಗನಕ್ಕೆಂದು ಪ್ರತ್ಯೇಕ ಧ್ವಾರಗಳು, ವ್ಯವಸ್ಥಿತ ಶೌಚಾಲಯಗಳು, ಮನರಂಜನಾ ಕೇಂದ್ರಗಳನ್ನು ಈ ನಿಲ್ದಾಣ ಹೊಂದಿರಲಿದೆ. ನಿಲ್ದಾಣದಲ್ಲಿ ಪ್ರಯಾಣಿಕರು ರೈಲುಗಳಿಗಾಗಿ ಕಾಯುವ ಕೋಣೆ ಸೌಲಭ್ಯ, ಫುಟ್ ಓವರ್ ಬ್ರಿಡ್ಜ್, ಎಟಿಎಂಗಳು, ಅಂಗಡಿ ಮಳಿಗೆಗಳು, ಚಿಲ್ಲರೆ ವ್ಯಾಪಾರದಂತಹ ವಿವಿಧ ತಿಂಡಿ ತಿನಿಸುಗಳ ಮಳಿಗೆಗಳು ಇರಲಿದೆ.
ಇನ್ನು ಪ್ರಯಾಣಿಕರ ಸುರಕ್ಷತೆಯ ಸಲುವಾಗಿ ಅತ್ಯಾಧುನಿಕ ಸಿಸಿ ಕ್ಯಾಮೆರಾ, ಕಾವಲು ಪಡೆ, ಅಗ್ನಿಶಾಮಕ ಪತ್ತೆ ಮತ್ತು ನಿಗ್ರಹ , ಏಕಕಾಲದಲ್ಲಿ 500 ವಾಹನಗಳ ನಿಲುಗಡೆಗೆ ವ್ಯವಸ್ಥೆಯನ್ನು ಈ ನಿಲ್ದಾಣ ಹೊಂದಲಿದೆ. 160 ವರ್ಷಗಳ ಹಿಂದೆ ದಂಡು ರೈಲು ನಿಲ್ದಾಣ ಕಾರ್ಯ ನಿರ್ವಹಿಸುತ್ತಿದ್ದ ಮಾದರಿಯನ್ನು ಚಿತ್ರಗಳ ಮೂಲಕ ಪ್ರಯಾಣಿಕರಲ್ಲಿ ಅರಿವು ಮೂಡಿಸಲು ಯೋಜನೆ ರೂಪಿಸಲಾಗಿದೆ.