ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 13 : ಖಾಸಗಿ ಶಾಲೆಯ ವ್ಯಾಮೋಹವನ್ನು ಬಿಟ್ಟು, ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಲು ಮುಂದಾಗಬೇಕು. ಈ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚಲು ಅವಕಾಶ ಕೊಡಬಾರದು ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಂ. ಮುನಿರಾಜು ತಿಳಿಸಿದರು.
ತಾಲೂಕಿನ ತಾವರೆಕೆರೆ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಹಾಗೂ ನಂದಗುಡಿ ಹೋಬಳಿ ಕಸಾಪ ವತಿಯಿಂದ ಅಯೋಜಿಸಿದ್ದ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆ ಮತ್ತಷ್ಟು ಸಮೃದ್ಧವಾಗಬೇಕಾದರೆ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ದಾಖಲಿಸುವತ್ತ ಕಾಳಜಿ ವಹಿಸಬೇಕು. ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣದ ಜೊತೆಗೆ ಸರಕಾರದ ಅನೇಕ ಸವಲತ್ತುಗಳು ಸಿಗುತ್ತಿವೆ. ಪೋಷಕರು ಸಾಲ ಮಾಡಿ ಖಾಸಗಿ ಶಾಲೆಗಳಲ್ಲಿ ಓದಿಸುವ ಬದಲು, ನಮ್ಮೂರಿನ ಶಾಲೆಗೆ ಮಕ್ಕಳನ್ನು ಸೇರಿಸಿ ಮೌಲ್ಯಧಾರಿತ ಶಿಕ್ಷಣ ದೊರಕುವಂತಹ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಟಿ.ನಾಗರಾಜ್ ಮಾತನಾಡಿ, ಸರಕಾರಿ ಕೆಲಸದಲ್ಲಿರುವ ಬಹುತೇಕ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲು ಮಾಡುತ್ತಾರೆ. ವೇತನ ಪಡೆಯುವುದು ಸರಕಾರಿ ಶಾಲೆಯಲ್ಲಿ. ಆದರೆ, ತಮ್ಮ ಮಕ್ಕಳು ಮಾತ್ರ ಖಾಸಗಿ ಶಾಲೆಗೆ ಕಳುಹಿಸುವುದು ಸಮಂಜಸವಲ್ಲ. ಶಿಕ್ಷಕ ವೃಂದ ಇತರರಿಗೆ ಆದರ್ಶವಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕೃಷ್ಣಕುಮಾರ್, ಶಿಕ್ಷಕರಾದ ರಮಾಮಣಿ, ಅಶೋಕ್, ತಾಲೂಕು ಕಸಾಪ ಕಾರ್ಯದರ್ಶಿ ಬಚ್ಚೇಗೌಡ, ನಂದಗುಡಿ ಹೋಬಳಿ ಕಸಾಪ ಅಧ್ಯಕ್ಷ ಬಿ.ಹರೀಶ್, ಪದಾಧಿಕಾರಿಗಳಾದ ನಾರಾಯಣಗೌಡ, ಬಿಎಂಟಿಸಿ ನಾಗರಾಜ್, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.