ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 6 : ದೇವಸ್ಥಾನಗಳಿಂದ ಮನುಷ್ಯ ಶಾಂತಿ ನೆಮ್ಮದಿ ಕಾಣಬಹುದೆಂದು ಪ್ರತಿಯೊಂದು ಹಳ್ಳಿಯಲ್ಲಿಯೂ ಧಾರ್ಮಿಕ ಕಾರ್ಯಗಳು ನಡೆಯುತ್ತದೆ. ದೇವಾಲಯಗಳು ಶಾಂತಿಗೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಹೆಚ್.ಎನ್. ಧರ್ಮೇಶ್ ಹೇಳಿದರು.
ತಾಲೂಕಿನ ನಂದಗುಡಿ ಹೋಬಳಿಯ ಕೊಂಡ್ರಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ವಿವಿಧ ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಮನುಷ್ಯನಲ್ಲಿ ಮಾನವೀಯ ಸದ್ಗುಣಗಳನ್ನು ಬೆಳೆಸುವ ಪುಣ್ಯ ಕ್ಷೇತ್ರಗಳು ದೇವಾಲಯ ಆಗಿರುವುದರಿಂದ, ನೆಮ್ಮದಿ ಸುಖ ಶಾಂತಿ ಪಡೆಯಲು ಎಲ್ಲರೂ ದೇವರ ಮೊರೆ ಹೋಗಬೇಕಾಗುತ್ತದೆ. ಪುರಾತನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ದೇವಾಲಯಗಳಲ್ಲಿ ಮಾನವನಿಗೆ ಶಕ್ತಿ ಸಿಗುತ್ತದೆ. ದೇವಾಲಯಗಳಿಗೆ ಹೋಗುವುದರಿಂದ ಮನಸ್ಸು ಶುದ್ದವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀಧರ್ಮೇಶ್ವರಸ್ವಾಮಿ, ಶ್ರೀವೇಣುಗೋಪಾಲಸ್ವಾಮಿ, ಶ್ರೀಮುನೇಶ್ವರ, ಗಂಗಮ್ಮ, ಚೌಡೇಶ್ವರಮ್ಮ, ಸಪಲಮ್ಮ, ವಿವಿಧ ದೇವರುಗಳ ಉತ್ಸವ ಮೂರ್ತಿ ಹಾಗೂ ಪುನೀತ್ ಭಾವಚಿತ್ರವನ್ನು ಅಲಂಕಾರಿಕ ಹೂ, ವಿದ್ಯುತ್ ದೀಪಗಳಿಂದ ಅಲಂಕೃತವಾದ ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು, ತಮಟೆ ವಾದ್ಯಗಳ ನಿನಾದದೊಂದಿಗೆ ವೀರಗಾಸೆ ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ತಡ ರಾತ್ರಿಯವರೆಗೂ ನಡೆಯಿತು.
ಕಾರ್ಯಕ್ರಮದ ನೇತೃತ್ವವನ್ನು ಸೇವಾಕರ್ತರಾದ ರಾಮಕ್ಕ ನಾರಾಯಣಪ್ಪ, ಗೌರಮ್ಮ ಕನ್ನಮಂಗಲದಪ್ಪ, ಬೈಯ್ಯಣ್ಣ, ಚೊಕ್ಕಪ್ಪ ಕುಟುಂಬಸ್ಥರು, ಗ್ರಾಪಂ. ಸದಸ್ಯರಾದ ಮಂಜುನಾಥ್, ಮುನಿವೆಂಕಟಮ್ಮ ಬಚ್ಚಪ್ಪ, ಮುಖಂಡರಾದ ಮುನಿರತ್ನಪ್ಪ, ರಾಮ, ಲಕ್ಷಣ್ ಕರ್ಣ, ಬಸಪ್ಪ, ರವಿಶಂಕರ್, ದೇವರಾಜ್, ಗಂಗಾಧರ್, ನಂಜುಂಡಮೂರ್ತಿ, ನಟರಾಜ್ ಹಾಗೂ ಇತರರು ವಹಿಸಿದ್ದರು.