ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಸೆ.5:ಸಮಾನತೆಯ ಹರಿಕಾರರಾಗಿ ದೀನ ದಲಿತರು, ಹಿಂದುಳಿದ ವರ್ಗಗಳ ಏಳಿಗೆಗಾಗಿ, ಆ ಕಾಲದಲ್ಲಿ ಮೇಲ್ಜಾತಿಗೆ ಮಾತ್ರ ಮೀಸಲಿದ್ದ ಶಿಕ್ಷಣವನ್ನು ಎಲ್ಲರಿಗೂ ತಲುಪುವಂತೆ ಮಾಡಿ ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದ ಜ್ಯೋತಿ ಬಾ ಪುಲೆ ಹಾಗೂ ಸಾವಿತ್ರಿ ಬಾ ಪುಲೆರನ್ನು ಶಿಕ್ಷಕರ ದಿನದಂದುಸ್ಮರಿಸಬೇಕು ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿಯ ಜಿಲ್ಲಾ ಮುಖಂಡ ಜಾಲಿಗೆ ವಸಂತ್ ಅಭಿಪ್ರಾಯಪಟ್ಟರು.
ಪಟ್ಟಣದ ವಿಜಯಪುರ ವೃತ್ತದಲ್ಲಿನ ಪ್ರಜಾವಿಮೋಚನಾ ಬಹುಜನ ಸಮಿತಿಯ ಕಛೇಯಲ್ಲಿ ರಾಷ್ಟ್ರೀಯ ಶಿಕ್ಷಕರ ದಿನ’ದ ಪ್ರಯುಕ್ತ ಹಮ್ಮಿಕೊಂಡಿದ್ದ ಜ್ಯೋತಿ ಬಾ ಪುಲೆ ಹಾಗೂ ಸಾವಿತ್ರಿ ಬಾ ಪುಲೆ ಸ್ಮರಣಾ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದರು.
ಇಂದಿಗೂ ಸಾಕಷ್ಟು ಜನರು ಮೌಢ್ಯತೆಗಳಿಗೆ ಮರುಳಾಗಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಅವರನ್ನು ಜಾಗೃತಗೊಳ್ಳಿಸುವ ಕರ್ತವ್ಯ ಎಲ್ಲರ ಮೇಲಿದೆ ಧರ್ಮ ಪಂಥ, ಸಂಪ್ರದಾಯದಂತಹ ಸಂಕುಚಿತ ಭಾವನೆಗಳಿಂದ ಹೊರಬರಬೇಕಿದೆ. ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು ಎಂಬುದು ನೆನಪಿನಲ್ಲಿಟ್ಟುಕೊಂಡು ಸಂಘಟಿತವಾಗಿ ಜೀವನ ಸಾಗಿಸಬೇಕು. ಏನು ಪರಿಶ್ರಮ ಪಡದೇ ವ್ಯರ್ಥ ಧಾರ್ಮಿಕ ಕೋರಿಕೆಯಿಂದ ಮೂಢ ಜನರನ್ನು ಹೊರತರಲು ಶಿಕ್ಷಣ ಒಂದೇ ದಾರಿ ಎಂದು ತಿಳಿಸಿಕೊಟ್ಟರು ಎಂದರು.
ತಾಲ್ಲೂಕು ಅಧ್ಯಕ್ಷ ಪೂಜನಹಳ್ಳಿ ಪ್ರಕಾಶ್ ಮಾತನಾಡಿ, ‘ಯಾವ ಭಾಷಾ ಮಾಧ್ಯಮವೂ ಮೇಲಲ್ಲ ಯಾವುದು ಕೀಳಲ್ಲ ಎಂಬುದು ಮಕ್ಕಳಗೆ ತಿಳಿಸಬೇಕಿದೆ. ಯಾರಿಗೂ ಪಕ್ಷಪಾತ ಮಾಡದೇ ತಮ್ಮ ಕೈಲಾಗುವ ಸಹಾಯವನ್ನು ಸಮಾಜಕ್ಕೆ ಮಾಡಬೇಕಿದೆ. ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನರಾಗಿ ಯುವ ಜನರು ಮುಂದೆ ಬರಬೇಕಿದ್ದು, ಅವರ ಶಿಕ್ಷಣದ ಶಕ್ತಿಯಿಂದ ದೇಶದಿಂದಲೇ ಭ್ರಷ್ಟಚಾರವನ್ನು ತೋಲಗಿಸಬೇಕು’ ಎಂದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ಅರದೇಶನಹಳ್ಳಿ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಅನುಪಮ, ಸಂಘಟನಾ ಕಾರ್ಯದರ್ಶಿ ನಿಲೇರಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ಜಾಲಿಗೆ ಸುರೇಶ್ ಇದ್ದರು.