ಸುದ್ದಿಮೂಲ ವಾರ್ತೆ
ಹೊಸಕೋಟೆ ನ. 04 : ತಮ್ಮ ವೃತ್ತಿ ಜೀವನದಲ್ಲಿ ಕನ್ನಡವನ್ನು ಬಳಸಿಕೊಂಡು ಮತ್ತೊಬ್ಬರಿಗೆ ಮಾದರಿಯಾಗುತ್ತಿರುವ ವಕೀಲರ ಕಾರ್ಯ ಎಲ್ಲರೂ ಮೆಚ್ಚುವಂತದ್ದಾಗಿದೆ ಎಂದು ಅ ಆ ಸಂಸ್ಥೆಯ ಅಧ್ಯಕ್ಷ ಕೆ. ರಮೇಶ್ ತಿಳಿಸಿದರು.
ಹೊಸಕೋಟೆ ನಗರದ ವಿಷ್ಣು ಭವನದ ಸಬಾಂಗಣದಲ್ಲಿ ಕನ್ನಡ ಬಾಷೆಯಲ್ಲಿ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡುವ ಮೂಲಕ ಎಲ್ಲರನ್ನು ಸೆಳೆಯುತ್ತಿರುವ ಕನ್ನಡಾಭಿಮಾನಿ ವಕೀಲರಿಗೆ ಗೌರವ ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅ ಆ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಬಳಿಕ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಸಾಮಾನ್ಯ ಭಾಷೆಯಾಗಿ ಬಳಕೆ ಆಗುತ್ತದೆ. ಆದರೆ, ನ್ಯಾಯಲಯಗಳಲ್ಲಿ ಹೆಚ್ಚಾಗಿ ಆಂಗ್ಲ ಬಾಷೆ ಬಳಸುವುದರಿಂದ ಗ್ರಾಮಾಂತರ ಭಾಗದ ಜನರಿಗೆ ಹೆಚ್ಚು ಸಮಸ್ಯೆ ಆಗುತ್ತಿದೆ. ಅದರಲ್ಲೂ ವಕೀಲ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಂಗ್ಲ ಬಾಷೆ ಬಳಸುತಿದ್ದು ನ್ಯಾಯಾಲಯದ ನೋಟಿಸ್ ಆಗಲಿ ದೂರು ದಾಖಲು ಮಾಡಲೂ ಸಹ ಆಂಗ್ಲ ಬಾಷೆಯಲ್ಲಿ ಪತ್ರ ವ್ಯವಹಾರ ನಡೆಯುವುದರಿಂದ ಅನೇಕ ಕನ್ನಡ ಬಾಷೆಯನ್ನೆ ಬಲ್ಲವರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿದೆ. ಇದನ್ನು
ತೊಡೆದು ಹಾಕಲು ತಮ್ಮ ವೃತ್ತಿಯಲ್ಲಿ ಸಂಪೂರ್ಣ ಕನ್ನಡ ಬಾಷೆಯನ್ನು ಅಳವಡಿಸಿಕೊಂಡು ನ್ಯಾಯಾಲಯದ ಕಾರ್ಯಕಲಾಪಗಳನ್ನು ನಿರರ್ಗಳವಾಗಿ ಕನ್ನಡದಲ್ಲೇ ವಾದ ಮಂಡಿಸಿ ಎಲ್ಲರ ಗಮನ ಸೆಳೆದಿರುವ ಈ ವಕೀಲರ ಕಾರ್ಯ ಮತ್ತೊಬ್ಬರಿಗೆ ಮಾದರಿಯಾಗಲಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಂ ಮುನಿರಾಜ್ ಮಾತನಾಡಿ ಕನ್ನಡ ಭಾಷೆಯ ನಾಡಿನ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ಕೇವಲ ನವೆಂಬರ್ ಕನ್ನಡಿಗರಾಗದೆ ಪ್ರತಿ ದಿನ ಪ್ರತಿ ಕ್ಷಣ ಕನ್ನಡ ಬಾಷೆಯ ಬಗ್ಗೆ ಅಭಿಮಾನ ಹೊಂದುವ ಮೂಲಕ ಅನ್ಯ ಭಾಷಿಕರಿಗೆ ಪ್ರೀತಿಯಿಂದಲೇ ಕನ್ನಡವನ್ನು ಕಲಿಸುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ, ಅತಿ ಪ್ರಾಚೀನ ಹಾಗೂ ಹಲವಾರು ವಿಶೇಷತೆ ಒಳಗೊಂಡ ಕನ್ನಡವನ್ನು ಕಲಿತಲ್ಲಿ ಅದರಷ್ಟು ಸುಂದರ ಹಾಗೂ ಸರಳ ಬಾಷೆ ಮತ್ತೊಂದಿಲ್ಲ ಎಂದರು.
ಈ ಸಂದರ್ಭದಲ್ಲಿ ಕನ್ನಡ ಬಾಷೆಯಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ಮುತ್ಕೂರು ಮನೋಹರ್, ಪ್ರಭಾಕರ್,ರಾಮಚಂದ್ರೇಗೌಡ, ರವಿಕುಮಾರ್ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರಾದ ಹನುಮಂತ ರಾವ್, ರಾಜೇಂದ್ರ, ಮುನಿರಾಜ್, ಲಕ್ಷ್ಮಿ ಕಾಂತ್, ಶ್ರೀನಿವಾಸ್, ಧರ್ಮಸ್ಥಳ ಸಂಘದ ತಾಲೂಕು ಪ್ರಜಕ್ಟ್ ವ್ಯವಸ್ಥಾಪಕ ಭೋಜ, ತಾಲೂಕು ಕಸಾಪ ಗೌರವಾಧ್ಯಕ್ಷ ಬಚ್ಚೇಗೌಡ, ನಂದಗುಡಿ ಹೋಬಳಿ ಅಧ್ಯಕ್ಷಹರೀಶ್ ಮೊದಲಾದವರು ಹಾಜರಿದ್ದರು.