ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಜು17;ದೇವಸಂದ್ರದಿಂದ ಅಯ್ಯಪ್ಪನಗರ ಮೂಲಕ ಹೂಡಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದ್ದು ಇಲ್ಲಿ ದಿನನಿತ್ಯ ವಾಹನ ಸವಾರರು ಸಂಚರಿಸಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಸುಮಾರು ಐವತ್ತಕ್ಕೂ ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ರಸ್ತೆ ಬಹಳ ಕಿರಿದಾಗಿದ್ದು ರಸ್ತೆ ಆಗಲೀಕರಣ ಮಾಡುವ ಯೋಜನೆ ನೆನೆಗುದಿಗೆ ಬಿದ್ದಿರುವ ಕಾರಣ ಟ್ರಾಫಿಕ್ ಸಮಸ್ಯೆ ಸರ್ವಸಾಮಾನ್ಯವಾಗಿ ಪರಿಣಮಿಸಿದೆ.
ಕಾಡುಗುಡಿ, ವೈಟ್ ಫೀಲ್ಡ್, ವರ್ತೂರು, ಕುಂದಲಹಳ್ಳಿ, ಹೂಡಿ, ಬೆಳತ್ತೂರು, ಕೊಡಿಗೆಹಳ್ಳಿ ಸಾದರಮಂಗಲ, ಶೀಗೆಹಳ್ಳಿ ಮುಂತಾದ ಕಡೆ ತೆರಳಲು ಪ್ರಮುಖ ಮಾರ್ಗ ಇದಾಗಿದೆ. ಸವಾರರು ಇದೆ ರಸ್ತೆಯನ್ನು ಅವಲಂಬಿಸಬೇಕಾಗಿದೆ.
ಈ ಭಾಗದಲ್ಲಿ ಐಶಾರಾಮಿ ಹೋಟೆಲ್, ಐಟಿಪಿಎಲ್ ಕೈಗಾರಿಕಾ ಪ್ರದೇಶ, ಪ್ರತಿಷ್ಠಿತ ಆಸ್ಪತ್ರೆ, ಬಹುರಾಷ್ಟ್ರೀಯ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ತಲೆಎತ್ತಿವೆ. ಹೀಗಾಗಿ ಪ್ರತಿನಿತ್ಯ ಓಡಾಡುವ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ.
ದೇವಸಂದ್ರದಿಂದ ಅಯ್ಯಪ್ಪನಗರ ಮೂಲಕ ಹೂಡಿ ಕಡೆಗೆ ಸಾಗುವ ಪ್ರಮುಖ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಹೆಚ್ಚಾಗಿದ್ದು ಆಗಲಿಕರಣ ಮಾಡಲು ತೊಡಕಾಗಿದೆ. ಆಗಲಿಕರಣಕ್ಕೆ ವರ್ತಕರು ಮತ್ತು ಕೆಲವು ಪ್ರಭಾವಿಗಳ ಒತ್ತಡದಿಂದ ಆಗಲಿಕರಣ ನೆನೆಗುದಿಗೆ ಬಿದ್ದಿದೆ. ಈ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚಿನ ದಟ್ಟಣೆ ಇರುತ್ತದೆ ಎಂದು ದೇವಸಂದ್ರ ನಿವಾಸಿ ಗಂಗನಬೀಡು ವೆಂಕಟಸ್ವಾಮಿ ಆರೋಪಿಸಿದರು.
ಈ ರಸ್ತೆ ಮಹದೇವಪುರ ಹಾಗೂ ಕೆ.ಆರ್.ಪುರ ಕ್ಷೇತ್ರದ ಗಡಿ ವ್ಯಾಪ್ತಿಯಲ್ಲಿ ಪ್ರದೇಶದಲ್ಲಿದೆ. ರಸ್ತೆ ಆಗಲಿಕರಣ ಮಾಡುವಂತೆ ಇಲ್ಲಿನ ಜನರ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಮಹದೇವಪುರ ಹಾಗೂ ಕೆ.ಆರ್.ಪುರ ಎರಡು ಕ್ಷೇತ್ರದ ವ್ಯಾಪ್ತಿಯಲ್ಲಿ ದೇವಸಂದ್ರ ಮತ್ತು ಅಯ್ಯಪ್ಪನಗರ ಇದ್ದು ಈ ಭಾಗದ ಶಾಸಕರು ಆಸಕ್ತಿ ತೊರದ ಹಿನ್ನೆಲೆಯಲ್ಲಿ ಕಾಮಗಾರಿ ಹಲವು ವರ್ಷಗಳಿಂದ ಪ್ರಗತಿ ಕಂಡಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಅಂಬ್ಯುಲೆನ್ಸ್ ಬರಲು ಸಾಧ್ಯವಾಗಿದ ಪರಿಸ್ಥಿತಿ ಇಲ್ಲಿದೆ. ಆದರೆ ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ ಎಂದು ದೂರಿದರು.
ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ಐಟಿಪಿಎಲ್ ಕೈಗಾರಿಕಾ ಕ್ಷೇತ್ರವೂ ಇಲ್ಲಿಯೇ ಹತ್ತಿರದಲ್ಲಿದೆ. ಐಟಿಬಿಟಿ ಜನರು ನಿತ್ಯ ಸಂಚಾರದಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಚಾರ ದಟ್ಟಣೆಯಲ್ಲಿ ಸಿಲಕಿಕೊಂಡರೆ ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತದೆ. ಕಿರಿದಾದ ರಸ್ತೆಯಲ್ಲಿಯೇ ರಸ್ತೆ ಮೇಲೆ ವಾಹನಗಳು ನಿಲ್ಲಿಸುವುದರಿಂದಲೂ ಕೂಡ ಸಮಸ್ಯೆ ಎನಿಸಿದೆ. ಕಿರಿದಾದ ರಸ್ತೆಯನ್ನು ಆಗಲಿಕರಣ ಮಾಡಿದರೆ ಅನುಕೂಲವಾಗುತ್ತದೆ ಎಂದುಕ್ಯಾಬ್ ಚಾಲಕ ವಿಕಾಸ್ ಹೇಳಿದರು.