ಹೊಸಕೋಟೆ, ಜೂ.1: ಹವಾಮಾನ ಏರಿಳಿತದಿಂದ ಕಂಗೆಟ್ಟಿರುವ ಕೃಷಿಕರು, ತಮ್ಮಲ್ಲಿರುವ ಅಲ್ಪ ಪ್ರಮಾಣದ ನೀರಿನಲ್ಲಿ ಉತ್ತಮ ರೇಷ್ಮೆ ತಯಾರಿಸುವ ಸೊಪ್ಪು ಬೆಳೆದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದೆ ಸಂಕಷ್ಟಗಳ ಸರಮಾಲೆ ಹೆಗಲೇರಿಸಿಕೊಳ್ಳುವ ಸ್ಥಿತಿ ಬೆಳೆಗಾರರಿಗೆ ಬಂದಿದೆ.
ಜಿಲ್ಲೆಯು ರೇಷ್ಮೆ ಕೃಷಿ ಹಾಗೂ ಹೈನೋದ್ಯಮಕ್ಕೆ ಹೆಸರು ವಾಸಿ. 5,716 ಹೆಕ್ಟೇರ್ ನಲ್ಲಿ ಹಿಪ್ಪುನೇರಳೆ ಬೆಳೆಯುತ್ತಾರೆ. ಜಿಲ್ಲೆಯ 527 ಹಳ್ಳಿಗಳಲ್ಲಿ 6,726 ಕುಟುಂಬಗಳು ರೇಷ್ಮೆ ಗೂಡನ್ನು ಉತ್ಪಾದಿಸುತ್ತಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಕುಟುಂಬಗಳು ಉತ್ಪಾದನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ .
ಹಾಕಿದ ಬಂಡವಾಳ ಇಲ್ಲ:
500-650 ರೂ. ಆಸುಪಾಸಿನಲ್ಲಿದ್ದ ಗೂಡಿನ ಬೆಳೆ ಇದೀಗ 350 ರೂ.ಗೂ ಏರಿಕೆ ಕಾಣದೆ ತೆವಳುತ್ತಿದೆ. ಸರಿ ಸುಮಾರು 200 ರೂ.ಗಳಷ್ಟು ಬೆಲೆ ಕುಸಿಯುತ್ತಲಿದ್ದು, ರೈತರು ಸಾಲ ಮಾಡಿ ಹಗಲಿರುಳು ಬೆವರು ಬಸಿದು ರೇಷ್ಮೆ ಗೂಡನ್ನು ಉತ್ಪಾದಿಸಿದ್ದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ಹಾಕಿದ ಬಂಡವಾಳ ಸಿಗದಂತಾಗಿ ಬೆಳೆಗಾರರು ದುಸ್ಥಿತಿ ಎದುರಿಸುವಂತಾಗಿದೆ.
ಕೊರೊನಾ ನ೦ತರ ಕಳೆದ ವರ್ಷ ದಲ್ಲಾಳಿಗಳಿಗೆ ಕಡಿವಾಣ, ಸಿಸಿಟಿವಿ ಅಳವಡಿಕೆ ಇ- ಪೇಮೆಂಟ್ ಸೇರಿದಂತೆ ಹಲವು ದಿಟ್ಟ ಕ್ರಮಗಳನ್ನು ಇಲಾಖೆ ಕೈಗೊಂಡಿದ್ದರಿಂದ ಐತಿಹಾಸಿಕ ದಾಖಲೆ ಪ್ರಮಾಣದಲ್ಲಿ ರೇಷ್ಮೆ ಗೂಡಿನ ಬೆಲೆ ಸಾವಿರಕ್ಕೇರಿ 4 ಅಂಕೆಗಳನ್ನು ದಾಟಿ ಮಾರಾಟವಾಗಿತ್ತು. ಸದಾ ಸೋಲುಗಳನ್ನೇ ಕಂಡಿದ್ದ ರೈತರಲ್ಲಿ ಮಂದಹಾಸ ಮೂಡಿಸಿತ್ತು.
ನಿರ್ವಹಣಾ ವೆಚ್ಚ ದುಬಾರಿ:
ಕಳೆದೆರಡು ತಿಂಗಳಿಂದಲೂ ರೇಷ್ಮೆ ಗೂಡಿನ ಬೆಲೆ 250 ರೂ. ಒಳಗಡೆಯೆ ಮುಗ್ಗರಿಸುತ್ತಿದೆ. ಒಂದು ಕಡೆ ಗೂಡಿನ ಬೆಲೆ ಕುಸಿತ, ಚಾಕಿ ಹುಳುವಿನ ಬೆಲೆ, ಕೆಲಸಗಾರರ ಕೂಲಿ, ಹುಳುಮನೆ ಹಾಗೂ ಹಿಪ್ಪುನೇರಳೆಗೆ ಬಳಸುವ ರಾಸಾಯನಿಕ ಇನ್ನಿತರ ನಿರ್ವಹಣಾ ವೆಚ್ಚವೂ ಗಗನಕ್ಕೇರಿದೆ. ಮಾರಾಟದ ನಂತರ ಕೈಗೆ ಬಂದ ಕಾಸು ಸಮತೂಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ.
ಹಿಪ್ಪುನೇರಳೆ ಸೊಪ್ಪನ್ನು ಕೊಳ್ಳುವವರಿಲ್ಲದೆ ಸೊಪ್ಪು ಮಾರಿ ಜೀವನ ಸಾಗಿಸುತ್ತಿದ್ದ ರೈತರ ಗೋಳು ಹೇಳತೀರದಾಗಿದೆ. ಕೇಳಿದಷ್ಟು ಬೆಲೆಗೆ ಕೊಡಲು ಮುಂದಾದರೂ ಖರೀದಿಸಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಕಟಾವು ಮಾಡಿ ಜಾನುವಾರುಗಳಿಗೆ ಹಾಕಲು ಮುಂದಾಗಿದ್ದಾರೆ. ಹಲವೆಡೆ ಕಟಾವಾಗದೆ ಗಿಡದಲ್ಲಿ ಸೊಪ್ಪು ಬಾಡುವಂತಾಗಿದೆ.
ಮಗ್ಗದ ಕಾರ್ಖಾನೆಗಳು ಬಂದ್:
ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದರಿಂದ ಕೂಲಿ ಕಾರ್ಮಿಕರು ಅನಾರೋಗ್ಯ ಮತ್ತಿತರೆ ನೆಪವೊಡ್ಡಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರಿಂದ ಕೆಲಸಗಾರರಿಲ್ಲದೆ ನೂಲು ತಯಾರಿಸುತ್ತಿದ್ದ ಮಗ್ಗದ ಕಾರ್ಖಾನೆಗಳು ಬಂದ್ ಆಗಿವೆ. ಉತ್ತಮ ಇಳುವರಿಯಾಗಿ ಗೂಡಿನ ಉತ್ಪಾದನೆ ಹೆಚ್ಚಾಗಿ, ಮಾರುಕಟ್ಟೆಯಲ್ಲಿ ಕೊಳ್ಳುವ ರೀಲರ್ಗಳೇ ಇಲ್ಲವಾದ್ದರಿಂದ ರೇಷ್ಮೆಗೂಡಿನ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ .
ರೇಷ್ಮೆಗೂಡಿನ ಬೆಲೆ ಕುಸಿತದ ಕರಿನೆರಳು ಮುಂದುವರಿದಿದ್ದು, ಇದೇ ರೀತಿ ಬೆಲೆ ಕುಸಿಯುತ್ತಿದ್ದರೆ ಈಗಿನ ಬೆಲೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಅಸಲು ಕೂಡ ಕೈಗೆ ಸಿಗದಂತಾಗಿದೆ. ಮಾಡಿದ ಸಾಲ ತೀರಿಸಲಾಗದೆ, ಮುಂದಿನ ಜೀವನ ನಿರ್ವಹಣೆಗೆ ರೇಷ್ಮೆ ಕೃಷಿಗೆ ತಿಲಾಂಜಲಿ ಇಟ್ಟು ನಗರಗಳತ್ತ ರೈತರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕೂ ಮುನ್ನ ಸರಕಾರ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸಬೇಕಾಗಿದೆ ಎಂಬುದು ರೇಷ್ಮೆ ಕೃಷಿ ರೈತರ ಮನವಿ.
2.5 ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಸೊಪ್ಪು ಬೆಳೆದಿದ್ದು, 151 ಮೊಟ್ಟೆ ಮೇಯಿಸುತ್ತೇವೆ. 100 ಕೆಜಿ ರೇಷ್ಮೆಗೂಡು ಉತ್ಪಾದಿಸಿದ್ದು, ಮಾರುಕಟ್ಟೆಯಲ್ಲಿ ಕೆ.ಜಿಗೆ 300 ರಂತೆ ಮಾರಾಟವಾಗಿದೆ. ಮಾರಾಟ ದರಕ್ಕಿಂತ ಉತ್ಪಾದನಾ ವೆಚ್ಚ ಅಧಿಕವಾಗಿದ್ದು, ಶ್ರಮಕ್ಕೆ ತಕ್ಕ ಲಾಭ ಸಿಗುತ್ತಿಲ್ಲ, ಸರಕಾರ ನಷ್ಟ ಪರಿಹಾರ ನೀಡುವತ್ತ ಗಮನ ಹರಿಸಬೇಕು.
– ನಾಗಣ್ಣ, ರೇಷ್ಮೆ ಬೆಳೆಗಾರ, ಚಿಕ್ಕಕೋಲಿಗ
ಕಳೆದ ಎರಡು ತಿಂಗಳಿನಿಂದಲೂ ರೇಷ್ಮೆ ಗೂಡಿನ ದರದಲ್ಲಿ ಕುಸಿತ ಉಂಟಾಗಿದೆ. ಈ ಅವಧಿಯಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಾಗಿದ್ದು, ಗೂಡು ಖರೀದಿಸಲು ಬರುವವರ ಸಂಖ್ಯೆ ಬಹುತೇಕ ಕಡಿಮೆಯಾದ್ದರಿಂದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಈ ಬಗ್ಗೆ ಸರಕಾರ ನಿಗಾ ವಹಿಸಿದ್ದು, ರೈತರ ನಷ್ಟ ಸರಿದೂಗಿಸಲು ಬೆಂಬಲ ಬೆಲೆ ಘೋಷಣೆ ಮಾಡುವ ನಿರೀಕ್ಷೆ ಇದೆ.
– ಪ್ರಭಾಕರ್, ಜಿಲ್ಲಾ ರೇಷ್ಮೆ ಉಪನಿರ್ದೇಶಕ