ಸುದ್ದಿಮೂಲ ವಾರ್ತೆ
ಹೊಸಕೋಟೆ ಅ,19 : ತಾಲೂಕಿನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿ
ಕೆರೆಗಳಿಗೆ ನೀರು ತುಂಬಿಸುವ ವೆಂಗಯ್ಯನ ಕೆರೆ ಏತನೀರಾವರಿ ಯೋಜನೆ ನನ್ನಹೋರಾಟದ ಫಲವಾಗಿದ್ದು, ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಆದರೆ, ಶಾಸಕ ಶರತ್ ಬಚ್ಚೇಗೌಡ ತಾನೇ ಅನುದಾನ ತಂದು ಮಾಡಿದಂತೆ ಬಿಂಬಿಸಿಕೊಳ್ಳುತ್ತಿದ್ದು ಜನರಿಗೆಸತ್ಯಾಂಶ ತಿಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2018 ರಲ್ಲಿ ನಾನು ಶಾಸಕನಾಗಿದ್ದಾಗ ಕೆ.ಆರ್ ಪುರ, ಮೇಡಹಳ್ಳಿ ಮತ್ತು ಕಾಡುಗೋಡಿ ಎಸ್ಟಿಪಿಯಿಂದ ಸಂಸ್ಕರಿಸಿದ ನೀರನ್ನು ಏತ ನೀರಾವರಿ ಯೋಜನೆ ಮೂಲಕ ತಾಲ್ಲೂಕಿನ 30 ಕೆರೆಗಳಿಗೆ ತುಂಬಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ಬಜೆಟ್ನಲ್ಲಿ 100 ಕೋಟಿ ಅನುದಾನ ಮೀಸಲಿರಿಸಿದ್ದೆ. ನಂತರ
ಚುನಾವಣೆ ನಡೆದು ರಾಜ್ಯದಲ್ಲಿ ಹೊಸದಾಗಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಸಮ್ಮಿಶ್ರ ಸರ್ಕಾರದಲ್ಲಿಯೂ ಮಂಜೂರಾತಿ ಹಾಗೂ ಅನುದಾನ ಬಿಡುಗಡೆಗೆ ಸಾಕಷ್ಟು
ಪ್ರಯತ್ನ ನಡೆಸಿದ್ದೇನೆ. ಆದರೆ ಅಭಿವೃದ್ದಿ ಕಾಮಗಾರಿಗಳಿಗೆ ಹಾಗೂ ಕೆರೆಗಳಿಗೆ ಅನುದಾನ ಬಿಡುಗಡೆ ಮಾಡದಿದ್ದಾಗ ಬೇಸರಗೊಂಡು ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಹೇಳಿಕೊಂಡರು.
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಬಳಿ ಸಾಕಷ್ಟು ಬಾರಿ ಒತ್ತಡ ಹಾಕಿದ ಪರಿಣಾಮವಾಗಿ 30 ಕೆರೆಗಳ ಜೊತೆಗೆ ಇನ್ನೂ 8 ಕೆರೆಗಳನ್ನು ಹೆಚ್ಚುವರಿಯಾಗಿ ಸೇರಿಸಿ 100ಕೋಟಿಯಿಂದ 140 ಕೋಟಿಗೆ ಪ್ರಸ್ತಾವನೆಯನ್ನು ಹೆಚ್ಚಿಸಿ 140 ಕೋಟಿ ವೆಚ್ಚದಲ್ಲಿ 38 ಕೆರೆಗಳಿಗೆ ನೀರುತುಂಬಿಸುವ ಯೋಜನೆಗೆ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಿದ್ದರು. ಬಳಿಕಯಡಿಯೂರಪ್ಪ ಅವರು ಹೊಸಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿದ್ದರು.
ಅಂದಿನಿಂದಲೂ ಕಾಮಗಾರಿ ಪ್ರಗತಿಯಲ್ಲಿತ್ತು, ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು,ಪರೀಕ್ಷಾರ್ಥವಾಗಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದರು.
ಆದರೆ, ಯಾರದೋ ಶ್ರಮವನ್ನು ತಮ್ಮ ಶ್ರಮವೆಂಬಂತೆ ಬಿಂಬಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ
ನೀಡುತ್ತಿರುವುದು ಎಷ್ಟು ಸರಿ. ಶಾಸಕರಾಗಿ ತಾಲ್ಲೂಕಿಗೆ ಇವರು ನೀಡಿರುವ ಕೊಡುಗೆಯಾದರೂ ಏನು? ಎಂದು ಶಾಸಕ ಶರತ್ ಬಚ್ಚೇಗೌಡರ ವಿರುದ್ದ ಎಂಟಿಬಿನಾಗರಾಜ್ ವಾಗ್ದಾಳಿ ನಡೆಸಿದರು.