ಸುದ್ದಿಮೂಲವಾರ್ತೆ ಗಂಗಾವತಿ,ಏ.೬- ನಮ್ಮ ಪಕ್ಷದ ಹೈಕಮಾಂಡ್ ಗುರುವಾರ ಬಿಡುಗಡೆ ಮಾಡಿದ ದ್ವಿತೀಯ ಅಭ್ಯರ್ಥಿಗಳ ಘೋಷಣೆ ಪಟ್ಟಿಯಲ್ಲಿ ಗಂಗಾವತಿ ವಿಧಾನ ಸಭಾ ಕ್ಷೇತ್ರದಿಂದ ಇಕ್ಬಾಲ್ ಅನ್ಸಾರಿ ಅವರ ಹೆಸರಿದೆ. ಆದರೆ ಬಿ ಫಾರ್ಮ್ ಸಿಗುವವರೆಗೂ ಇದು ಅಂತಿಮ ಅಲ್ಲ. ನನಗೂ ಟಿಕೆಟ್ ಸಿಗುವ ವಿಶ್ವಾಸವಿದೆ ಕಾದು ನೋಡಿ ಎಂದು ಈ ಕ್ಷೇತ್ರದ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್. ಆರ್. ಶ್ರೀನಾಥ್ ಅಸಮಧಾನ ವ್ಯಕ್ತಪಡಿಸುವುರೊಂದಿಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಅನ್ಸಾರಿಗೆ ಟಿಕೆಟ್ ಘೋಷಣೆ ಬಳಿಕ ಅವರು ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಯಚೂರು ನಗರ ಕ್ಷೇತ್ರದಲ್ಲಿ ೯೦ ಸಾವಿರ ಮುಸ್ಲಿಂ ಸಮುದಾಯದ ಮತದಾರರಿದ್ದಾರೆ. ಈ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆ ಆಗಿಲ್ಲ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದಡಿ ಒಂದು ವೇಳೆ ರಾಯಚೂರು ನಗರ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಘೋಷಿಸಿದರೆ ಆಗ ಗಂಗಾವತಿ ವಿಧಾನ ಸಭಾ ಕ್ಷೇತ್ರದಿಂದ ಈಗ ಘೋಷಣೆಯಾದವರ ಹೆಸರು ಬದಲಾಗಿ ತಮಗೇ ಸಿಗುವ ಸಾಧ್ಯತೆ ಮತ್ತು ವಿಶ್ವಾಸ ನನಗಿದೆ ಹೀಗಾಗಿ ಪಕ್ಷದ ಬಿ ಫಾರ್ಮ್ ಸಿಗುವವರೆಗೂ ಈಗ ಗಂಗಾವತಿ ಕ್ಷೇತ್ರಕ್ಕೆ ಘೋಷಿಸಿದವರ ಹೆಸರು ಅಂತಿಮ ಅಲ್ಲ ಎಂದು ಶ್ರೀನಾಥ್ ತಿಳಿಸಿದ್ದಾರೆ.