ಮಾನವೀಯ ಸೇವೆ ದೈವಿಕ ಸೇವೆ: ರಾಜ್ಯಪಾಲರು
ಬೆಂಗಳೂರು,ಜೂ.10: ವೈದ್ಯಕೀಯ ಸೇವೆಯು ಅತಿದೊಡ್ಡ ಮಾನವ ಮತ್ತು ದೈವಿಕ ಸೇವೆಯಾಗಿದೆ. ವೈದ್ಯರನ್ನು ದೇವರ ಸ್ವರೂಪ ಎಂದು ಪರಿಗಣಿಸಲಾಗಿದೆ.
ವೈದ್ಯರಾಗಿ ಸೇವೆಗಳನ್ನು ಒದಗಿಸಿದಾಗ ಮತ್ತು ಅದನ್ನು ಮಾನವೀಯ ಸೇವೆಯನ್ನಾಗಿ ಮಾಡಿದಾಗ, ಖಂಡಿತವಾಗಿಯೂ ಯಶಸ್ವಿ ವೈದ್ಯರಾಗಬಹುದು ಮತ್ತು ಭವಿಷ್ಯದಲ್ಲಿ ಹೆಚ್ಚಿನ ಉತ್ಕೃಷ್ಟತೆಯನ್ನು ಸಾಧಿಸಬಹುದು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ ಎನ್ ಟಾಟಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದ 25ನೇ ಘಟಿಕೋತ್ಸವದಲ್ಲಿ ಭಾಗಹವಹಿಸಿ ಅವರು ಮಾತನಾಡಿದರು.
ದೇವರು ಕೊಟ್ಟ ದೊಡ್ಡ ಸಂಪತ್ತು ಆರೋಗ್ಯ. ಆರೋಗ್ಯಕರ ಮನಸ್ಸು ಮತ್ತು ಆರೋಗ್ಯಕರ ಮೆದುಳು ದೇಹದಲ್ಲಿ ವಾಸಿಸುತ್ತವೆ. ಆರೋಗ್ಯ ಸೇವೆಯು ದೈವಿಕ ಸೇವೆಯಾಗಿದೆ, ಈ ದೈವಿಕ ಸೇವಾ ಕಾರ್ಯದಲ್ಲಿ ಇಂದು ವೈದ್ಯಕೀಯ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳು ಯಶಸ್ವಿಯಾಗಬೇಕೆಂದು ಎಂದರು.
ಪ್ರಾಚೀನ ಭಾರತವು ವೈದ್ಯಕೀಯ ವಿಜ್ಞಾನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಪ್ರಸ್ತುತ ಆಧುನಿಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಹೆಚ್ಚಿದೆ. ನಮ್ಮಲ್ಲಿ ಉತ್ತಮ ತಂತ್ರಜ್ಞಾನ, ಉತ್ತಮ ರೋಗಶಾಸ್ತ್ರಜ್ಞರು, ಉತ್ತಮ ವೈದ್ಯಕೀಯ ಸೌಲಭ್ಯಗಳಿವೆ. ಭಾರತೀಯ ವೈದ್ಯಕೀಯ ಶಿಕ್ಷಣದಲ್ಲಿ ವಿಶ್ವ ದರ್ಜೆಯ ಗುಣಮಟ್ಟವನ್ನು ತರಲು ವಿಶ್ವವಿದ್ಯಾಲಯದಿಂದ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಅನೇಕ ಹೊಸ ಆರಂಭಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿರುವ ಈ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವೈದ್ಯಕೀಯ ಶಿಕ್ಷಣದ ಗುಣಮಟ್ಟ ಮತ್ತು ಬದ್ಧತೆಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. 25 ವರ್ಷಗಳಿಗೂ ಹೆಚ್ಚಿನ ಪ್ರಯಾಣದಲ್ಲಿ ಈ ವಿಶ್ವವಿದ್ಯಾಲಯವು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಎರಡೂ ಕ್ಷೇತ್ರಗಳಲ್ಲಿ ಶ್ಲಾಘನೀಯ ಪ್ರಗತಿಯನ್ನು ಸಾಧಿಸಿದೆ ಎಂದು ಪ್ರಶಂಸಿಸಿದರು.
ಸ್ವಾತಂತ್ರ್ಯದ ಈ 75 ವರ್ಷಗಳಲ್ಲಿ ದೇಶ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ದೇಶದ ಆರ್ಥಿಕತೆಯಲ್ಲಿ ಸಾಕಷ್ಟು ಶಕ್ತಿ ಬಂದಿದೆ. ಮುಂದಿನ 25 ವರ್ಷಗಳ ಸಮಯವು ಕರ್ತವ್ಯದ ಅವಧಿಯಾಗಿದೆ. ಈ ಕರ್ತವ್ಯದ ಅವಧಿಯಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಮತ್ತು ದೇಶದ ಆರ್ಥಿಕತೆಯನ್ನು ವಿಶ್ವದ ಮೂರನೇ ಸ್ಥಾನಕ್ಕೆ ಕೊಂಡೊಯ್ಯಲು ಸರ್ಕಾರ ಸಂಕಲ್ಪ ಮಾಡಿದೆ ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಪದ್ಮವಿಭೂಷಣ ಡಾ.ಕೆ. ಕಸ್ತೂರಿರಂಗನ್, ಡಾ.ಪಿ.ಸತೀಶ್ ಚಂದ್ರ ಮತ್ತು ಡಾ.ಎಂ.ಕೆ. ಸುದರ್ಶನ್, ಅವರಿಗೆ ಜ್ಞಾನ-ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಅತ್ಯುತ್ತಮ ಮತ್ತು ಅನುಪಮ ಕಾರ್ಯಕ್ಕಾಗಿ ಗೌರವ ಪದವಿಯನ್ನು ನೀಡಿ ಗೌರವಿಸಲಾಗಿದೆ. ಅವರ ಈ ಸಮಾಜ ಕಾರ್ಯ ಹೀಗೆ ನಿರಂತರವಾಗಿರಲಿ ಹಾಗೂ ಯುವ ಪೀಳಿಗೆಗೆ ಇವರು ಸ್ಪೂರ್ತಿಯಾಗಿರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯನ್ಯಾಯಾಮೂರ್ತಿಗಳಾದ ಪ್ರಸನ್ನ ಬಿ ವರಾಳೆ, ಕುಲಪತಿ ಡಾ.ಎಂ.ಕೆ ರಮೇಶ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.