ಸುದ್ದಿಮೂಲ ವಾರ್ತೆ
ಕನಕಪುರ,ಸೆ.21- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಎ ಗ್ರೇಡ್ ದೇಗುಲವೆಂದೇ ಪ್ರಸಿದ್ಧಿ ಹೊಂದಿರುವ ಕಬ್ಬಾಳಮ್ಮ ದೇವಾಲಯದ ಹುಂಡಿ ಎಣಿಕೆ ಕಾರ್ಯವು ಕಂದಾಯ ಇಲಾಖೆಯ ಅಧಿಕಾರಿಗಳ ಹಾಗು ದೇವಾಲಯದ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.
ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ತಾಲ್ಲೂಕು ತಹಶೀಲ್ದಾರ್ ಸ್ಮಿತಾರಾಮುರವರ ಆದೇಶದ ಮೇರೆಗೆ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಎಣಿಕೆ ಕಾರ್ಯವನ್ನು ನಡೆಸಲಾಯಿತು. ಎಣಿಕೆ ಕಾರ್ಯದಲ್ಲಿ 54,96,315 ಸೇರಿದಂತೆ 86 ಗ್ರಾಂ ಚಿನ್ನ ಹಾಗು 318 ಗ್ರಾಂ ಬೆಳ್ಳಿ ಕಾಣಿಕೆಯೊಂದಿಗೆ ಒಟ್ಟು 55,07,315 ರೂ. ಸಂಗ್ರಹವಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಪತಹಶೀಲ್ದಾರ್ ಮನೋಹರ್, ಸಾತನೂರು ನಾಡಕಚೇರಿ ಅಧಿಕಾರಿಗಳು, ಸಿಬ್ಬಂದಿ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ದೇವಾಲಯ ಆಡಳಿತ ಮಂಡಳಿ ಸಿಬ್ಬಂಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.