ಸುದ್ದಿಮೂಲ ವಾರ್ತೆ
ಕುಷ್ಟಗಿ,ಆ.28:ದಾರಿ ತಪ್ಪಿಸುವ ತಾತ್ಕಾಲಿಕ ಆಕರ್ಷಣೆಗಳಿಂದ ದೂರವಿದ್ದು, ಸಂಘಟನೆ, ಏಕತೆಗೆ ಒತ್ತು ನೀಡಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆ ಜಿಲ್ಲಾ ಪ್ರಮುಖ ಹುಸೇನಪ್ಪ ಮುದೇನೂರು ಅವರು ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಸಂಘಟನೆಯ ತಾಲೂಕು ಘಟಕದ ಪುನರ್ ರಚನೆ ಸಭೆಯಲ್ಲಿ ಅವರು ಮಾತನಾಡಿ, ಶತ ಶತಮಾನಗಳಿಂದ ಜಾತಿ-ಅಸ್ಪೃಶ್ಯತೆಯ ಸಂಕೋಲೆಗಳಿಂದ ದಲಿತ ಸಮುದಾಯದವರು ಹೊರ ಬರುತ್ತಾ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು, ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನಾತ್ಮಕವಾಗಿ ಬುನಾದಿ ಹಾಕಿಕೊಟ್ಟಿದ್ದ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ಸವಲತ್ತುಗಳನ್ನು ಇಲ್ಲವಾಗಿಸುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅನ್ಯಾಯ ಒಳಗಾದವರ ಪರ ಹೋರಾಟ ನಡೆಸಿ ನ್ಯಾಯ ಕೊಡಿಸುವುದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆ ಪ್ರಮುಖ ಧ್ಯೇಯ ಆಗಬೇಕು ಎಂದರು.
ಸಂಘಟನೆಯ ಇನ್ನೊರ್ವ ಪ್ರಮುಖ ಚಂದಪ್ಪ ಗುಡಗಲದಿನ್ನ ಅವರು ಮಾತನಾಡಿ, ಸಾಮ್ರಾಜ್ಯಶಾಹಿವಾದ, ಬಂಡವಾಳ ಶಾಹಿಗಳ ವಿರುದ್ಧ ದಸಂಸ ನಿರಂತರ ಸಂಘಟಿತ ಹೋರಾಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್ ಅವರ ಸೂಚನೆ ಮೇರೆಗೆ ಕುಷ್ಟಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕುಷ್ಟಗಿ ತಾಲ್ಲೂಕಿನ ಪ್ರಧಾನ ಸಂಚಾಲಕಾಗಿ ದುರಗೇಶ ದೇವರಮನಿ, ತಾಲೂಕು ಸಂಘಟನೆ ಸಂಚಾಲಕರಾಗಿ ಗೋತಗೆಪ್ಪ ಗೋತಗಿ, ಶರಣಪ್ಫ ಕೊರಡಕೇರಾ, ಶರಣಪ್ಪ ಬಿಜಕಲ್, ಹನುಮಂತ ವಿರುಪಾಪುರ ಹಾಗೂ
ತಾಲೂಕ ಖಜಾಂಚಿಯಾಗಿ ವಿನಾಯಕ ಮದ್ನಾಳ ಆಯ್ಕೆಯಾದರು.
ತಾಲೂಕು ಸಂಘಟನೆಯ ನೂತನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.