ಸುದ್ದಿಮೂಲ ವಾರ್ತೆ
ಚಿಕ್ಕಮಗಳೂರು, ಏ.7: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈ.ಎಸ್.ವಿ. ದತ್ತ ಅವರಿಗೆ ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಕಾರಣ ತೀವ್ರ ಬೇಸರಗೊಂಡಿರುವ ಅವರು ಮುಂದಿನ ನಡೆ ಕುರಿತು ಚರ್ಚಿಸಲು ಇದೇ 9ರಂದು ಕಡೂರಿನಲ್ಲಿ ಅಭಿಮಾನಿಗಳ ಸಭೆ ಏರ್ಪಡಿಸಿದ್ದಾರೆ.
ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ದತ್ತ ಮನೆಯಲ್ಲಿ ಜಮಾಯಿಸಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿ, ದತ್ತಾ ಅವರಿಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಕಳೆದ ಮೂರ್ನಾಲ್ಕು ದಶಕಗಳ ಜೆಡಿಎಸ್ ಸಂಬಂಧವನ್ನು ಕಳೆದುಕೊಂಡು ಕಳೆದ ಎರಡು ತಿಂಗಳ ಹಿಂದಷ್ಟೆ ಕಾಂಗ್ರೆಸ್ ಸೇರಿದ್ದರು. ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಿದ್ದಂತೆ ಅಭಿಮಾನಿಗಳಲ್ಲಿ ಕಾಂಗ್ರೆಸ್ ಟಿಕೆಟ್ ದತ್ತ ಅವರಿಗೆ ಸಿಗಲಿದೆ. ಜಾತ್ಯಾತೀತ ನಾಯಕ ದತ್ತ ಗೆದ್ದೆ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ವೈ.ಎಸ್.ವಿ.ದತ್ತಾ ಬೆಂಬಲಿಗರಿಗೆ ಶಾಕ್ ನೀಡಿದೆ.
ಅಭಿಮಾನಿಗಳ ಸಭೆ ಕರೆದಿರುವ ಸಂಬಂಧ ವೈಎಸ್ವಿ ದತ್ತಾ ಅವರು ಪತ್ರವೊಂದನ್ನು ಬರೆದಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ. ಪತ್ರದ ಸಾರಾಂಶ ಇಂತಿದೆ.
‘ನೀವು ನನಗೆ ಪ್ರೀತಿಯನ್ನು ಧಾರೆ ಎರೆದಿದ್ದೀರಿ, ಹಣವಿಲ್ಲದ, ಜಾತಿ ಇಲ್ಲದ ನನ್ನನ್ನು ‘ದತ್ತಣ್ಣ ನಮ್ಮ ದತ್ತಣ್ಣ’ ಎಮದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ ‘ನಿಮ್ಮ ಜೊತೆಗೇ ನಾನಿರಬೇಕು, ನನ್ನ ಜೊತೆಗೇ ನೀವಿರಬೇಕು’ ಎಂಬುದು ಅನಿವಾರ್ಯವಾಗಿದೆ.
ಈ ಕಾರಣದಿಂದ ಇದು ನನ್ನ ಮತ್ತು ನಿಮ್ಮೆಲ್ಲರ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಆದ ಅವಮಾನವಾಗಿದೆ.
ಈ ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕಾಗಿ, ನಾನು ನಿಮ್ಮೆಲ್ಲರ ಆಶೀರ್ವಾದವನ್ನು ಬೇಡಲು ಕಡೂರು ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹರಸಿ ಆಶೀರ್ವದಿಸಬೇಕು ಎಂದು ಅವರು ಕೋರಿದ್ದಾರೆ.
ಟಿಕೆಟ್ ಭರವಸೆ ನೀಡುವುದಿಲ್ಲ
ವೈಎಸ್ ವಿ ದತ್ತಾ ಅವರು ಸ್ವಾಭಿಮಾನದ ಸಭೆ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಕಾಂಗ್ರೆಸ್ ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳಬೇಕಾದರೂ ಯಾರಿಗೂ ಟಿಕೆಟ್ ಭರವಸೆ ನೀಡುವುದಿಲ್ಲ. ಬೇಷರತ್ತಿನಿಂದ ಸೇರಿಸಿಕೊಳ್ಳುತ್ತೇವೆ. ಹಾಲಿ ಶಾಸಕರು ಬಂದರೂ ಅವರು ಕಾರ್ಯಕರ್ತರಾಗಿ ದುಡಿಯಲು ಬಯಸುತ್ತೇವೆ, ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಕೆಲವರಿಗೆ ಆಕ್ರೋಶ ಇರುತ್ತದೆ. ನಾವು ಅದನ್ನು ಸರಿ ಮಾಡುತ್ತೇವೆ’ ಎಂದು ತಿಳಿಸಿದರು