ಸುದ್ದಿಮೂಲ ವಾರ್ತೆ
ಬೆಂಗಳೂರು, ನ. 13 : ಬ್ರ್ಯಾಂಡ್ ಬೆಂಗಳೂರಿಗಾಗಿ ಹೊಸ ಆಲೋಚನೆಗಳ ಆವಿಷ್ಕಾರಕ್ಕೆ ಅಂತರ ಶಾಲಾ ಐಡಿಯಾಥಾನ್ ಸ್ಪರ್ಧೆ ಆರಂಭಿಸಲಾಗಿದೆ. ತಮ್ಮ ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಲಾ ಮಕ್ಕಳಿಗಾಗಿ ಅಂತರಶಾಲಾ ಸ್ಪರ್ಧೆಯನ್ನು ಮಕ್ಕಳ ದಿನಾಚರಣೆಯಂದು ಘೋಷಿಸಲಾಗಿದೆ.
ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರು ನಗರಾದ್ಯಂತ ಶಾಲೆಗಳಲ್ಲಿ ವಿಭಿನ್ನ ಐಡಿಯಾಥಾನ್ ಮತ್ತು ಯುವ ನಾಯಕತ್ವ ಸಮ್ಮೇಳನ ಆರಂಭಿಸಲಾಗಿದೆ. ಬೆಂಗಳೂರು ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಸ್ಥಿರ ನಗರವನ್ನಾಗಿಸಲು ಕರ್ನಾಟಕ ಸರ್ಕಾರವು ಹಮ್ಮಿಕೊಂಡಿರುವ “ಬ್ರ್ಯಾಂಡ್ ಬೆಂಗಳೂರು” ಕಾರ್ಯಕ್ರಮದ ಮೂಲ ಉದ್ದೇಶಗಳ ಬಗ್ಗೆ ಮಕ್ಕಳಲ್ಲಿ ಅರಿವು, ಜಾಗೃತಿ ಮೂಡಿಸಲು, ಇದೇ ಮೊದಲ ಬಾರಿಗೆ ಇಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
“ಐಡಿಯಾಥಾನ್ 23” ಅಂತರ ಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮವಾಗಿದ್ದು, ನಗರದ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಪರಿಹಾರ ರೂಪಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳುವುದು ಇದರ ಮೂಲ ಉದ್ದೇಶವಾಗಿದೆ.
ಐಡಿಯಾಥಾನ್ ’23 ನಾಗರಿಕ ಚಟುವಟಿಕೆಯಲ್ಲಿ ಮಕ್ಕಳು ಪಾಲ್ಗೊಳ್ಳಲು ಒಂದು ವಿಶೇಷ ವೇದಿಕೆ. ಈ ಸ್ಪರ್ಧೆಯಲ್ಲಿ ಬೆಂಗಳೂರು ನಗರದಲ್ಲಿರುವ ಶಾಲೆಗಳ 10 ರಿಂದ 12 ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಶಾಲೆಯು ಇಬ್ಬರು ವಿದ್ಯಾರ್ಥಿಗಳ ಒಂದು ತಂಡವನ್ನು ಕಳಿಸಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ತಮ್ಮ ವಿಚಾರ ಮಂಡಿಸಲು ಅವಕಾಶವಿದೆ. ಈ ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮೊದಲು ನೊಂದಣಿಯಾಗುವ 200 ಶಾಲೆಗಳಿಗೆ ಮಾತ್ರ ಅವಕಾಶ.
ಆಸಕ್ತ ಶಾಲೆಗಳು 2023 ಡಿಸೆಂಬರ್ 5 ರೊಳಗೆ https://www.youngleadersofbengaluru.com ನಲ್ಲಿ ನೊಂದಣಿ ಮಾಡಿಕೊಳ್ಳಬಹುದು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಸಂವಾದ ನಡೆಸಲಿದ್ದಾರೆ. ಲೇಖಕಿ ಸುಧಾ ಮೂರ್ತಿ, ಯುವ ನಾಯಕತ್ವ ಸಮ್ಮೇಳನದ ಮುಖ್ಯ ತೀರ್ಪುಗಾರರಾಗಿರುತ್ತಾರೆ. ವಿದ್ಯಾರ್ಥಿಗಳ ಚಿಂತನೆ, ಪ್ರತಿಭೆ ಆವಿಷ್ಕಾರ ಕಾರ್ಯಕ್ರಮವು ಬೆಂಗಳೂರಿನ ಯುವ ಉತ್ಸಾಹಿ ಶಿಕ್ಷಣಜ್ಞೆ ಐಶ್ವರ್ಯ ಡಿಕೆಎಸ್ ಹೆಗ್ಡೆ ಅವರ ಪರಿಕಲ್ಪನೆಯಾಗಿದೆ. ನಗರ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಶಾಲಾ ಮಕ್ಕಳಿಗೆ ಅವಕಾಶ ಕಲ್ಪಿಸುವುದು ಅವರ ಉದ್ದೇಶವಾಗಿದೆ.