ಸುದ್ದಿಮೂಲ ವಾರ್ತೆ
ಮೈಸೂರು, ಜು.26 : ಕಳೆದ ಮೂರು ದಿನಗಳಿಗೆ ಹೋಲಿಸಿದರೆ ಬುಧವಾರ ಮಳೆಯ ಆರ್ಭಟ ಕೊಂಚ ತಗ್ಗಿದೆ. ಆದರೆ ಪ್ರವಾಹದಿಂದ ಗೋಡೆ ಕುಸಿತ, ತಗ್ಗು ಪ್ರದೇಶಗಳಿಗೆ ನೀರು ಹರಿದು ಮನೆಗಳು ಜಲಾವೃತ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿವೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ದೊಡ್ಡ ಮೇಟಿಕುರ್ಕೆಯಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದರೆ, ಅಲ್ಲಲ್ಲಿ ಮರಗಳು ನೆಲಕ್ಕುರುಳಿ ರಸ್ತೆ ಸಂಚಾರಕ್ಕೆ ಅಡಚಣೆ ಆಗಿರುವ ಘಟನೆಗಳು ಸಂಭವಿಸಿವೆ.
ಈ ನಡುವೆ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಮತ್ತು ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಗಳು ಭರ್ತಿ ಆಗಿದ್ದರೆ, ದೊಡ್ಡ ಅಣೆಕಟ್ಟುಗಳಾದ ಕೆಆರ್ಎಸ್ ಮತ್ತು ಹಾಸನ ಜಿಲ್ಲೆಯ ಗೊರೂರಿನಲ್ಲಿ ಇರುವ ಹೇಮಾವತಿ ಜಲಾಶಯಗಳು ಭರ್ತಿ ಆಗುತ್ತಿಲ್ಲ. ಆಗಬೇಕಾದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕನಿಷ್ಠ ಪಕ್ಷ ಒಂದು ವಾರವಾದರೂ ಮಳೆ ಸುರಿಯಬೇಕು. ಇಲ್ಲದಿದ್ದರೆ ಕಷ್ಟ.
ಹೀಗೆ ಜಲಾಶಯಗಳು ತುಂಬಿ ಸಂತಸ ತಂದಿದ್ದರೆ ಮತ್ತೊಂದು ಕಡೆ ಗೋಡೆ ಕುಸಿತದಿಂದ ಮಹಿಳೆ ಸಾವು ಮನೆಗಳಿಗೆ ನೀರು ನುಗ್ಗಿರುವುದು ದುಃಖಕರ ಸಂಗತಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಮಳೆ ಪ್ರಮಾಣ ತೀರ ಕಡಿಮೆಯಾಗಿದ್ದರೆ, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆ ಮುಂದುವರಿದಿದ್ದರೂ, ಹಿಂದಿನಂತೆ ಜೋರು ಇಲ್ಲ.
ಕಬಿನಿ : ಸದ್ಯ ಈ ಜಲಾಶಯದಲ್ಲಿ ಗರಿಷ್ಟ 2284 ಅಡಿಗಳಷ್ಟು ಇದ್ದು, 25 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಆದ್ದರಿಂದ ಜಲಾಶಯದ ಸಂಗ್ರಹ ಮಟ್ಟವನ್ನು ಜಲಾಶಯದ ಭದ್ರತೆ ಕಾರಣದಿಂದ 2282 ಅಡಿಗಳಿಗೆ ಕಾಯ್ದುಕೊಂಡು, 4 ಗೇಟ್ಗಳಿಂ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಆದರೆ ಈಗಲೂ ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರಿನಲ್ಲಿ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಳವಾಗಿ ಒಳ ಹರಿವು ಹೆಚ್ಚಾದರೆ, ಹೊರ ಹರಿವಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನದಿಪಾತ್ರದ ಜನರು ಆತಂಕಗೊಂಡಿದ್ದಾರೆ.
ಕೆಆರ್ಎಸ್
ಕೃಷ್ಣರಾಜ ಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಮತ್ತಷ್ಟು ಹೆಚ್ಚಿದೆ. ಬುಧವಾರ ಬೆಳಗ್ಗೆ ಹೊತ್ತಿಗೆ 51508 ಕ್ಯೂಸೆಕ್ ಇತ್ತು. ಜಲಾಶಯದ ಮಟ್ಟ 105 ಅಡಿ ತಲುಪಿದೆ. ಜಲಾಶಯ ತುಂಬಲು ಇನ್ನು19 ಅಡಿ ನೀರು ಅಗತ್ಯವಿದೆ.. 4 ಗಂಟೆಯಲ್ಲಿ ಜಲಾಶಯಕ್ಕೆ 4 ಟಿಎಂಸಿ ನೀರು ಹರಿದು ಬಂದಿದೆ. ಸದ್ಯ ಡ್ಯಾಂನಲ್ಲಿ 26.811 ಟಿಎಂಸಿ ನೀರು ಶೇಖರಣೆಯಾಗಿದೆ. ಹೊರಹರಿವಿನ ಪ್ರಮಾಣ 2853 ಕ್ಯೂಸೆಕ್ನಷ್ಟಿದೆ.
ಹರಿದು ಬರುತ್ತಿರುವ ನೀರಿನ ಪ್ರಮಾಣ ಮುಂದುವರಿದರೆ ಆಗಸ್ಟ್ ಮೊದಲ ವಾರದ ಒಳಗೆ ಜಲಾಶಯ ತುಂಬುವ ನಿರೀಕ್ಷೆಯಿದೆ. ಕೊಡಗಿನಲ್ಲೂ ಮಳೆ ಅಧಿಕವಾಗಿರುವುದು ಒಳಹರಿವನ್ನು ಹೆಚ್ಚಿಸಬಹುದು ಎನ್ನುತ್ತಾರೆ ಕೆಆರ್ಎಸ್ ಅಧಿಕಾರಿಗಳು.
ಕಾವೇರಿ ಕೊಳ್ಳದ ಭಾಗದ ರೈತರು ಮಳೆಯಿಲ್ಲದೆ ಪರಿತಪಿಸುವಂತಾಗಿತ್ತು. ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದವು. ನದಿ, ಕಾಲುವೆ ಭಣಗುಡುತ್ತಿದ್ದವು. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದರು. ಮೇ 29ರಂದು ಕೆಆರ್ಎಸ್ ನೀರಿನ ಮಟ್ಟ 79.72 ಅಡಿಗೆ ಕುಸಿದಿತ್ತು. ಹೀಗಾಗಿ ಹಾಸನದ ಹೇಮಾವತಿ ಜಲಾಶಯದಿಂದ ಕನ್ನಂಬಾಡಿ ಕಟ್ಟೆಗೆ ನೀರು ಹರಿಸಿ, ಒಂದು ವಾರಗಳ ಕಾಲ ನೀರು ಕೊಡಲಾಗಿತ್ತು. ಇದರಿಂದ ಮತ್ತೆ ಜೂನ್ 24ರಂದು 77.67 ಅಡಿಗೆ ಕುಸಿದಿತ್ತು. ಹಾಗಾಗಿ ಸರ್ಕಾರ ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಆದೇಶ ನೀಡಿತ್ತು
ಹಾರಂಗಿ
ಕೊಡಗಿನ ಪುಟ್ಟ ಜಲಾಶಯ ಹಾರಂಗಿಗೂ ನೀರು ಬಂದಿದೆ. ಹಾಸನ ಹಾಗೂ ಕೊಡಗಿನ ಮಳೆಯಿಂದಾಗಿ ಬುಧವಾರ ಬೆಳಿಗ್ಗೆ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಜಲಾಶಯದ ಮಟ್ಟ 2857.13 ಅಡಿ ತಲುಪಿದೆ. ಗರಿಷ್ಠ ಮಟ್ಟ 2859 ಅಡಿಗಳು. ಈಗ 13.195 ಟಿಎಂಸಿ ಸಂಗ್ರಹವಾಗಿದೆ. ಸದ್ಯ ಜಲಾಶಯದಿಂದ 12625 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಹೇಮಾವತಿ
ಹಾಸನ ತಾಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಮಳೆ ಜಿಲ್ಲೆಯಲ್ಲಿ ಕೊಂಚ ತಗ್ಗಿದೆ. ಮಳೆಯಿಂದಾಗಿ ಅರಸೀಕೆರೆ ತಾಲೂಕಿನ ದೊಡ್ಡ ಮೇಟಿ ಕುರ್ಕೆ ಗ್ರಾಮದಲ್ಲಿ ಮಣ್ಣಿನ ಗೋಡೆಯ ಮನೆ ಕುಸಿದು ಗೌರಮ್ಮ (62 ವರ್ಷ) ಮೃತಪಟ್ಟಿದ್ದಾರೆ ಸ್ಥಳಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ. ಮೃತರ ಕುಟುಂಬಕ್ಕೆ ಪರಿಹಾರ ವಿತರಿಸಿದರು. ಬುಧವಾರ ಯಾವುದೇ ತಾಲ್ಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಇಲ್ಲ.ಕಳೆದ ಎರಡು ದಿನಗಳಿಂದ ಐದು ತಾಲ್ಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ
ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿಗಳು
ಜಲಾಶಯದ ಇಂದಿನ ಮಟ್ಟ – 2909.00 ಅಡಿಗಳು
ಗರಿಷ್ಠ ನೀರಿನ ಸಂಗ್ರಹ ಪ್ರಮಾಣ- 37.103 ಟಿಎಂಸಿ
ಇಂದಿನ ನೀರಿನ ಸಂಗ್ರಹ ಪ್ರಮಾಣ – 25.936 ಟಿಎಂಸಿ
ಒಳಹರಿವು – 23281 ಕ್ಯೂಸೆಕ್
ಹೊರಹರಿವು – 200 ಕ್ಯೂಸೆಕ್