ಕಲಬುರಗಿ,ಜ.13: ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸುರಕ್ಷಿತ ಕ್ಷೇತ್ರವಲ್ಲ. ಒಂದು ವೇಳೆ ಅವರು ಅಲ್ಲಿಂದ ಸ್ಪರ್ಧಿಸಿದರೆ, ಹರಕೆಯ ಕುರಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಅವರು ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ನಿಲ್ಲುವಂತೆ ಯಾರು ಒತ್ತಡ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕೋಲಾರದಲ್ಲಿ ನಿಲ್ಲಿಸುವ ಮೂಲಕ ಅವರ ಪಕ್ಷದವರೆ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದರು.
ನಾನು ಸ್ವತಃ ಕೋಲಾರದಲ್ಲಿ ಸುತ್ತಾಡಿ, ಅಲ್ಲಿಯ ಜನರ ಭಾವನೆ ಅರಿತುಕೊಂಡಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆಯಾಗಲಿ ಅಥವಾ ನಾಯಕರಿಗಾಗಲಿ ಮತ ಪಡೆಯುವ ಶಕ್ತಿ ಇಲ್ಲ. ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ನಿಲ್ಲಿಸಲು ಹೊರಟಿದ್ದಾರೆ ಎಂದರು.
ಪಂಚಮಸಾಲಿ ಮೀಸಲಾತಿ 2ಡಿ ಸೇರ್ಪಡೆಗೆ ಹೈಕೋರ್ಟ್ ತಡೆ ವಿಚಾರವಾಗಿ ಮಾತನಾಡಿದ ಅವರು, 3ಬಿಯನ್ನು 2ಡಿಗೆ ಘೋಷಣೆ ಮಾಡಿ ರಂಗ ಎನ್ನುವ ಹೆಸರು ಮಂಗ ಮಾಡಿದ್ದಾರೆ. ಇವರು ಮೂಗಿಗೆ ತುಪ್ಪ ಸವರಿಲ್ಲ. ಬದಲಾಗಿ, ಹಣೆ ಮೇಲೆ ಸುರಿದು, ವಾಸನೆ ಸಹ ಬಾರದಂತೆ ಮಾಡಿದ್ದಾರೆ ಎಂದ ಅವರು, ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೋಸ ಮಾಡಿದೆ ಎಂದರು.
ರಾಜ್ಯಕ್ಕೆ ನರೇಂದ್ರ ಮೋದಿ ಬಂದಿರುವುದಕ್ಕೆ ಕಾಂಗ್ರೆಸ್, ಜೆಡಿಎಸ್ ಗೆ ಭಯ ಶುರುವಾಗಿದೆ ಎಂಬ ಸಿಪಿ ಯೋಗೇಶ್ವರ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರ ಮೋದಿ ಬಂದರೆ, ನಮಗ್ಯಾವ ಭಯವು ಇಲ್ಲ. ರಾಜ್ಯ ಸರ್ಕಾರ ಆಗಲಿ ಅಥವಾ ಕೇಂದ್ರ ಸರ್ಕಾರ
ಆಗಲಿ ಯಾವ ಯೋಜನೆಗಳನ್ನು ಜನರಿಗೆ ಕೊಟ್ಟಿದ್ದಿರಾ ಎಂಬುದರ ಬಗ್ಗೆ ನಿಮಗೆ ಭಯವಾಗಬೇಕು ಎಂದರು.
ಹುಬ್ಬಳ್ಳಿಯಲ್ಲಿ ಸ್ವಾಮಿ ವಿವೇಕಾನಂದರ ಕಾರ್ಯಕ್ರಮ ಮಾಡಿ, ವಿವೇಕಾನಂದ ಅವರ ಭಾವಚಿತ್ರವನ್ನೆ ಬಳಸಿಲ್ಲ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಬಿಜೆಪಿ ಪಾಲಿಗೆ ಇದು ಕೊನೆಯ ಚುನಾವಣೆ ಆಗಲಿದೆ ಎಂದರು.
ಭಾರತ ಜೋಡೋ ಸಮಾರೋಪ ಸಮಾರಂಭದ ಪ್ರಯುಕ್ತ ದೆಹಲಿಯಲ್ಲಿ ಕಾರ್ಯಕ್ರಮಕ್ಕೆ ಸರ್ವಪಕ್ಷ ಭಾಗಿಯಾಗಲು ಖರ್ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ನಮಗೆ ಯಾವುದೇ ಪತ್ರ ಬಂದಿಲ್ಲ. ನನಗೆ ಜನರ ಕಷ್ಟ ಸುಖ ನೋಡುವುದಿದೆ. ಅದಕ್ಕಾಗಿ ಪೂರ್ವನಿಯೋಜಿತ ಕಾರ್ಯಕ್ರಮಗಳಿದ್ದು ಆವರು ಕರೆದರೂ ನಾವು ಹೋಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.