ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.14: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ರಾಜಕೀಯ ಉದ್ದೇಶಕ್ಕಾಗಿ ಬಡವರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಿತ್ತು. ಅದರಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಯೋಜನೆಯಡಿ ಜು.1ರಿಂದ ಪ್ರತಿ ವ್ಯಕ್ತಿಗೆ 10 ಕೆಜಿ. ಅಕ್ಕಿ ನೀಡುವುದಾಗಿ ಘೋಷಿಸಲಾಗಿತ್ತು. ಕೇಂದ್ರ ಸರ್ಕಾರ ಈಗಾಗಲೇ ಐದು ಕೆ.ಜಿ. ಅಕ್ಕಿ ಕೊಡುತ್ತಿದೆ. ಅದರ ಜೊತೆಗೆ ರಾಜ್ಯದಿಂದ ಹೆಚ್ಚುವರಿಯಾಗಿ ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ಖರೀದಿಗೆ ನಿರಾಕರಿಸಿ ಬಡವರ ಪರವಾದ ಯೋಜನೆಗೆ ತೊಂದರೆ ನೀಡುತ್ತಿದೆ ಎಂದು ಅವರು ಶಕ್ತಿಭವನದಲ್ಲಿ ಬುಧವಾರ ಕರೆದಿದ್ದ ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಮಹಿಳೆಯರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯನ್ನು ಈಗಾಗಲೇ ಪರಿಣಾಮಕಾರಿಯಾಗಿ ಜಾರಿ ಮಾಡಲಾಗಿದೆ. ಈಗ ಅನ್ನಭಾಗ್ಯವೂ ಸಹ ಯಶಸ್ವಿಯಾದರೆ ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ದುರುದ್ದೇಶದಿಂದಲೇ ಈ ರೀತಿ ಅಡ್ಡಗಾಲು ಹಾಕಲಾಗುತ್ತಿದೆ. ಇದು ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಪ್ರತಿ ವ್ಯಕ್ತಿಗೆ ಹೆಚ್ಚುವರಿಯಾಗಿ ಐದು ಕೆ.ಜಿ. ಅಕ್ಕಿ ಕೊಡಬೇಕಾದರೆ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯ ಬೀಳುತ್ತದೆ. ಹೀಗಾಗಿ ಇದೇ 8ರಂದು ಭಾರತೀಯ ಆಹಾರ ಮಂಡಳಿ (ಎಫ್ಸಿಐ) ಉಪ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದು ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಕೊಡುವಂತೆ ಪತ್ರ ಬರೆಯಲಾಗಿತ್ತು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿ ಜೂ.12ರಂದು ರಾಜ್ಯ ಸರ್ಕಾರಕ್ಕೆ ಮರಳಿ ಪತ್ರ ಸಹ ಬರೆದಿದ್ದಾರೆ. ಪ್ರತಿ ಕೆ.ಜಿ.ಗೆ 34 ರೂ. ಮತ್ತು ಸಾರಿಗೆ ವೆಚ್ಚ ಪ್ರತಿ ಕೆ.ಜಿ.ಗೆ 2.60 ರೂ. ಸೇರಿ ಒಟ್ಟಾರೆ ಒಂದು ಕೆ.ಜಿ.ಗೆ 36.60 ರೂ. ನಿಗದಿ ಸಹ ಮಾಡಲಾಗಿದೆ. ಆದರೆ, ಜೂ.13ರಂದು ಮತ್ತೊಂದು ಪತ್ರ ಬಂದಿದ್ದು, ತೆರೆದ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯಗಳಿಗೆ ಅಕ್ಕಿ ಮಾರಾಟ ಸ್ಥಗಿತಗೊಳಿಸಲಾಗಿದೆ. ಇದು ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಲೇ ರಾಜ್ಯಕ್ಕೆ ಅಕ್ಕಿ ನಿರಾಕರಿಸಲಾಗಿದೆ ಎಂದು ಆರೋಪಿಸಿದರು.
ಎಫ್ಸಿಐ ಬಳಿ 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇದೆ. ನಾವು ಯಾವುದೇ ತೊಂದರೆ ಇಲ್ಲದೆ ಅಕ್ಕಿ ಖರೀದಿಗೆ ಕೊಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ನಾವು ಜು.1ರಿಂದ ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿ ಹೆಚ್ಚುವರಿಯಾಗಿ ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ, ಈಗ ಸಾಕಷ್ಟು ಅಕ್ಕಿ ದಾಸ್ತಾನು ಇಟ್ಟುಕೊಂಡರೂ ಸಹ ರಾಜ್ಯಕ್ಕೆ ಖರೀದಿಗೆ ಕೊಡದೆ ರಾಜಕೀಯ ಮಾಲಾಗುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಬಡವರ ವಿರೋಧಿಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪರ್ಯಾಯ ಮಾರ್ಗ:ಎಫ್ಸಿಐ ಅಕ್ಕಿ ನಿರಾಕರಿಸಿದ್ದರಿಂದ ನಾವು ಹಿಂದೇಟು ಹಾಕುವುದಿಲ್ಲ. ಜನರಿಗೆ ನೀಡಿರುವ ಗ್ಯಾರಂಟಿಯನ್ನು ಜಾರಿ ಮಾಡಲು ಪ್ರಯತ್ನ ಮುಂದುವರಿಸುತ್ತೇವೆ. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಗುರುವಾರ ತೆಲಂಗಾಣ ರಾಜ್ಯಕ್ಕೆ ತೆರಳಿ ಅಲ್ಲಿ ಅಕ್ಕಿ ದಾಸ್ತಾನು ಮತ್ತು ರಾಜ್ಯಕ್ಕೆ ಅಕ್ಕಿ ಖರೀದಿ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ.
ನಾನೂ ಸಹ ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ಇದಲ್ಲದೆ, ಅಕ್ಕಿ ಬೆಳೆಯುವ ರಾಜ್ಯಗಳಾದ ಛತ್ತೀಸ್ಗಢ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳೊಂದಿಗೂ ಸಹ ನಮ್ಮ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿಂದ ಅಕ್ಕಿ ಖರೀದಿ ಮಾಡಿ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಈಗಾಗಲೇ ಘೋಷಿಸಿದಂತೆ ಜು.1ರಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಲು ಎಲ್ಲಾ ಪ್ರಯತ್ನವನ್ನೂ ಮಾಡಲಾಗುವುದು. ತೆಲಂಗಾಣ ಮತ್ತಿತರ ರಾಜ್ಯಗಳೊಂದಿಗೆ ಚರ್ಚಿಸಿದ ಬಳಿಕ ಪರ್ಯಾಯ ಮಾರ್ಗಗಳ ಬಗ್ಗೆ ತಿಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಆಹಾರ ಮತ್ತು ನಾಗರಿಕ ಪೈರೈಕೆ ಸಚಿವ ಕೆ.ಎಚ್. ಮುನಿಯಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.