ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಅ.11:ಇನ್ನು 15 ದಿನಗಳೊಳಗೆ ರೈತರ ಪಂಪ್ಸೆಟ್ಗೆ ದಿನಕ್ಕೆ 6 ರಿಂದ 7 ಗಂಟೆಗಳ ಕಾಲ ವಿದ್ಯುತ್ ನೀಡಲು ಕಾಂಗ್ರೆಸ್ ಸರ್ಕಾರ ಕ್ರಮ ವಹಿಸದಿದ್ದರೆ, ಪ್ರತಿ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ನೀಡದಿದ್ದರೆ ʼವಿಧಾನಸೌಧ ಚಲೋʼ ಪಾದಯಾತ್ರೆ ಮಾಡಲಾಗುವುದು ಎಂದು ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಕ್ರಮಗಳನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್ ಹಾಗೂ ಸಂಸದ ವಿ.ಮುನಿಸ್ವಾಮಿ ಅವರು ಡಾ.ಕೆ.ಸುಧಾಕರ್ ಅವರ ಜೊತೆ ಎತ್ತಿನಗಾಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಡಾ.ಕೆ.ಸುಧಾಕರ್, ನವೆಂಬರ್ 30 ರೊಳಗೆ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ನೀಡದಿದ್ದರೆ, *ಡಿಸೆಂಬರ್ನಿಂದ ಬಾಗೇಪಲ್ಲಿಯಿಂದ ʼವಿಧಾನಸೌಧ ಚಲೋ ಪಾದಯಾತ್ರೆʼ* ಮಾಡಲಾಗುವುದು. 7 ಗಂಟೆ ವಿದ್ಯುತ್ ನೀಡದಿದ್ದರೆ ಪ್ರತಿ ತಾಲೂಕು ಮಟ್ಟದಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ನೀಡಿದ್ದರು. ಅವರು ಕಾಂಗ್ರೆಸ್ನಲ್ಲೇ ಇದ್ದರೂ, ಆಗಿನ ಕಾಂಗ್ರೆಸ್ ಬೇರೆಯೇ ಆಗಿತ್ತು. ನಂತರ ಕಾಂಗ್ರೆಸ್ ತನ್ನ ಚಿಹ್ನೆಯನ್ನು ಜೋಡೆತ್ತು ಮಾಡಿಕೊಂಡಿದ್ದು, ನಂತರ ಹಸು-ಕರು ಚಿಹ್ನೆ ತಂದರು. ಇವೆಲ್ಲವೂ ರೈತರನ್ನು ಪ್ರತಿನಿಧಿಸುವ ಗುರುತಾಗಿತ್ತು. ಆದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ರೈತರಿಗೆ ಟೋಪಿ ಹಾಕುವ ಸಂಪ್ರದಾಯವನ್ನು ಕಾಂಗ್ರೆಸ್ನ ಮುಂದುವರಿಸಿಕೊಂಡು ಬಂದಿದೆ. ಹಸ್ತದ ಗುರುತು ಬಂದ ನಂತರ ಕೈ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಉಚಿತ ಗ್ಯಾರಂಟಿ ನೆಪದಲ್ಲಿ ಜನರಿಗೆ ಟೋಪಿ ಹಾಕಿ ಅಧಿಕಾರ ಪಡೆಯಲಾಗಿದೆ. ಕೋವಿಡ್ ಬಂದಾಗ ಪ್ರಧಾನಿ ನರೇಂದ್ರ ಮೋದಿ 84 ಕೋಟಿ ಕುಟುಂಬಗಳಿಗೆ ಅಕ್ಕಿ, ಉಚಿತ ಚಿಕಿತ್ಸೆ, ಉಚಿತ ಲಸಿಕೆ ನೀಡಿದ್ದರು. ಬಿಜೆಪಿ ಇವುಗಳ ಬಗ್ಗೆ ಭರವಸೆಯನ್ನೇ ನೀಡದೆ ಉಚಿತವಾಗಿ ನೀಡಿತ್ತು. ಆದರೀಗ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತರಿಗೆ ನೋವು ಖಚಿತ, ಆತ್ಮಹತ್ಯೆ ನಿಶ್ಚಿತ ಎಂಬಂತಾಗಿದೆ. ಸುಳ್ಳು ಹೇಳಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ಗೆ ಜನರ ಶಾಪ ತಟ್ಟಲಿದೆ ಎಂದರು.
ಕೊಳ್ಳೆ ಹೊಡೆದ ಮೇಲೆ ಕೋಟೆಗೆ ಬೀಗ ಹಾಕಿದಂತೆ ಕಾವೇರಿ ನೀರನ್ನು ಅಲಯನ್ಸ್ ಪಾರ್ಟ್ನರ್ ತಮಿಳುನಾಡಿಗೆ ಬಿಟ್ಟ ಮೇಲೆ ಕಾಂಗ್ರೆಸ್ ಸರ್ಕಾರ ಸಭೆ ಕರೆಯುತ್ತದೆ. ಚಿಕ್ಕಬಳ್ಳಾಪುರದ ರೈತರು ಪ್ರತಿ ದಿನ ನಾಲ್ಕೂವರೆ ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಅದಕ್ಕಾಗಿ ಹಾಲು ಒಕ್ಕೂಟ ರೂಪಿಸಲಾಗಿತ್ತು. ಆದರೆ ಕಾಂಗ್ರೆಸ್ ನನ್ನ ಮೇಲಿನ ದ್ವೇಷದಿಂದ ಒಕ್ಕೂಟ ರದ್ದುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಗಾದರೂ ಅಧಿಕಾರ ಪಡೆಯಬೇಕೆಂದು ಸುಳ್ಳು ಹೇಳಿ, ವಾಮಮಾರ್ಗದಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಇಂತಹ ಸರ್ಕಾರ ದೀರ್ಘಕಾಲ ಇರುವುದಿಲ್ಲ. ಐದು ತಿಂಗಳಲ್ಲಿ ಶಾಪಗ್ರಸ್ತವಾಗಿರುವ ಸರ್ಕಾರಕ್ಕೆ ಭವಿಷ್ಯವಿಲ್ಲ. ನಾವು ಹೋಬಳಿಗೊಂದು ಆಸ್ಪತ್ರೆ ನಿರ್ಮಿಸಿದರೆ ಈ ಸರ್ಕಾರ ಪಂಚಾಯಿತಿಗೊಂದು ಮದ್ಯದಂಗಡಿ ನಿರ್ಮಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರತಿ ಹೋಬಳಿಯಲ್ಲಿ ಆಸ್ಪತ್ರೆ ಮಂಜೂರು ಮಾಡಿಸಿದ್ದೇನೆ. ಬೇರೆ ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಜಿಲ್ಲೆಗೆ ತಂದು ನಿರ್ಮಾಣ ಮಾಡಿಸಿದ್ದೇನೆ. ಆದರೆ ಅದನ್ನು ಇನ್ನೂ ಉದ್ಘಾಟಿಸದ ಇಲ್ಲಿನ ಶಾಸಕರು, ಜನರ ಪ್ರತಿನಿಧಿಯಾಗಲು ನಾಲಾಯಕ್ಕು. ಹಾಲು ಒಕ್ಕೂಟ ಬೇರೆ ಜಿಲ್ಲೆಗೆ ಸೇರಿದ್ದರೂ ಇವರು ಪ್ರತಿಭಟಿಸಿಲ್ಲ. ಸ್ವಾಭಿಮಾನ ಇರುವ ಯಾವುದೇ ಪ್ರತಿನಿಧಿ ಹೀಗಾಗಲು ಬಿಡುತ್ತಿರಲಿಲ್ಲ ಎಂದರು.
ಜನತೆಯೇ ಬಿಗ್ಬಾಸ್
ನನಗೆ ಚಿಕ್ಕಬಳ್ಳಾಪುರದ ಜನತೆಯೇ ಬಿಗ್ಬಾಸ್. ಅನಾಥ ಎಂದು ಹೇಳಿಕೊಂಡೇ ಲಾಟರಿ ಶಾಸಕರಾಗಿ, ಜನರನ್ನು ಅನಾಥರನ್ನಾಗಿ ಮಾಡಿ ಬಿಗ್ಬಾಸ್ಗೆ ಹೋದವರಿಗೆ ನಾಚಿಕೆಯೇ ಇಲ್ಲ. *ಸತ್ಯವೇ ಹೇಳದವರನ್ನು ಇಲ್ಲಿನ ಜನರು ಶಾಸಕರನ್ನಾಗಿ ಮಾಡಿದ್ದಾರೆ.* ನಾನು ಜನರ ಹೃದಯದಲ್ಲಿ ಇರಲು ಬಂದಿದ್ದೇನೆಯೇ ಹೊರತು, ಪರಿಶ್ರಮ ಎಂದು ಇಪ್ಪತ್ತು, ಮೂವತ್ತು ಕಾಲೇಜು ಮಾಡಿಕೊಳ್ಳಲು ಬಂದಿಲ್ಲ ಎಂದು ಡಾ.ಕೆ.ಸುಧಾಕರ್ ಹೇಳಿದರು.
ನನ್ನ ತಾಯಿಯ ಹೆಸರಿನಲ್ಲಿ 15 ವರ್ಷದಿಂದ ಕಾಲೇಜು ನಡೆಸಿ ಶಿಕ್ಷಣ ನೀಡುತ್ತಿದ್ದೇನೆ. ರಾಜಕಾರಣಕ್ಕೆ ಬರುವ ಮುನ್ನವೇ ಈ ಕ್ಷೇತ್ರದ 15 ಸಾವಿರ ವಿದ್ಯಾರ್ಥಿಗಳಿಗೆ ಐದು ವರ್ಷ ಉಚಿತ ಬಸ್ಪಾಸ್ ನೀಡಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರ ವಿದ್ಯುತ್ ನೀಡದೆ ಇಡೀ ರಾಜ್ಯವನ್ನು ಕತ್ತಲೆಗೆ ದೂಡಿದೆ. ಕಿಸಾನ್ ಸಮ್ಮಾನ್ ನಿಧಿ ಕಡಿತ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಕಡಿತ, ಸಾವಯವ ಕೃಷಿಗೆ ಸಹಾಯಧನ ಸ್ಥಗಿತ ಮೊದಲಾದವುಗಳಿಂದ ಇದು ರೈತ ವಿರೋಧಿ ಸರ್ಕಾರ ಎಂಬುದು ಸಾಬೀತಾಗಿದೆ. ಬಡಜನ ವಿರೋಧಿ ಹಾಗೂ ರೈತ ವಿರೋಧಿಯಾದ ಈ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ.
-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ತಮಿಳುನಾಡು ಸರ್ಕಾರದೊಂದಿಗಿನ ದೋಸ್ತಿಗಾಗಿ ಕಾಂಗ್ರೆಸ್ ಕಾವೇರಿ ನೀರನ್ನು ನೀಡಿದೆ. ಕಾವೇರಿ ನೀರು ಬೆಂಗಳೂರಿನ ಜನರ ಹಕ್ಕಾಗಿದ್ದು, ಕಾಂಗ್ರೆಸ್ ಬೆಂಗಳೂರಿಗರಿಗೆ ದ್ರೋಹ ಬಗೆದಿದೆ. ಉಚಿತವೆಂದು ಹೇಳಿ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ದೋಚುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಸರ್ಕಾರ ಪಾಪರ್ ಆಗಿದ್ದು, ಒಂದು ಕಿ.ಮೀ. ರಸ್ತೆ ನಿರ್ಮಿಸಿಲ್ಲ, ಆಸ್ಪತ್ರೆ ನಿರ್ಮಿಸಿಲ್ಲ. ದರ ಏರಿಕೆಯಿಂದ ಪ್ರತಿ ಕುಟುಂಬದಲ್ಲಿ 5 ಸಾವಿರ ರೂ. ವೆಚ್ಚ ಹೆಚ್ಚಿದೆ. ಅಭಿವೃದ್ಧಿ ಕಾರ್ಯಕ್ಕೆ ಅನುದಾನವಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.
ಆರ್.ಅಶೋಕ್, ಮಾಜಿ ಸಚಿವರು
ಕಾಂಗ್ರೆಸ್ ಸರ್ಕಾರ ವಿದ್ಯುತ್ ಲೋಡ್ಶೆಡ್ಡಿಂಗ್ ಮಾಡುತ್ತಿರುವುದರಿಂದ ನಮ್ಮ ಜಿಲ್ಲೆಯ ಮಕ್ಕಳು ಪರೀಕ್ಷೆಗೆ ಓದಲು ಮೇಣದಬತ್ತಿ ಬಳಸುತ್ತಿದ್ದಾರೆ. ಇಲ್ಲಿನ ಕಾಂಗ್ರೆಸ್ ಶಾಸಕರು ಜನರ ದಾರಿ ತಪ್ಪಿಸಿ ವಿಲನ್ ಆಗಿದ್ದಾರೆ. ಶಾಸಕರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.