ಹೊಸಕೋಟೆ, ಆ.12: ತಾಲೂಕಿನಲ್ಲಿ ಶಾಸಕರು, ಅವರ ಕುಟುಂಬದವರು ಮತ್ತು ಹಿಂಬಾಲಕರು ನೂರಾರು ಎಕರೆ ಸರ್ಕಾರಿ ಜಮೀನುಗಳನ್ನು ಕಬಳಿಕೆ ಮಾಡಿದ್ದು, ಅದನ್ನು ವಾಪಸ್ ಪಡೆಯದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಕುಟುಂಬದವರು ಮತ್ತು ಬೆಂಬಲಿಗರು ಅಕ್ರಮ ಆಸ್ತಿಗಳನ್ನು ತಿದ್ದಿ ಸಕ್ರಮ ಮಾಡಿಕೊಳ್ಳಲು ನಿವೃತ್ತಿ ಅಂಚಿನಲ್ಲಿರುವ ತಹಶಿಲ್ದಾರ್ ಒಬ್ಬರನ್ನು ಶಾಸಕ ಶರತ್ ಬಚ್ಚೇಗೌಡ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಶಾಂತನಪುರ ಗ್ರಾಮದ ಸರ್ವೆ ನಂ 9ರಲ್ಲಿ 263 ಎಕರೆ ಜಮೀನನ್ನು ಅಕ್ರಮವಾಗಿ ಕಬಳಿಸಿರುವ ಶಾಸಕರ ಕುಟುಂಬದವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಹೈಕೋರ್ಟ್, ಲೋಕಾಯುಕ್ತ, ಸಿವಿಲ್ ನ್ಯಾಯಾಲಯ, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೂ ಸಹ ತಹಶೀಲ್ದಾರ್ ರವರ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಆಸ್ತಿಗೆ ಪೋಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ವಿಚಾರ ನನಗೆ ಕೇಳಿ ಬಂದಿರುವುದರಿಂದ ಈಗಾಗಲೇ ನಾನು ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಯಾರೇ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾದರೆ ಅಧಿಕಾರಿಗಳೇ ಕಾನೂನು ಕ್ರಮ ಎದರಿಸಬೇಕಾಗುತ್ತದೆ ಎಂದರು.
ಈ ಹಿಂದೆ ಉಪ ವಿಭಾಗದಾಧಿಕಾರಿಗಳು ಶಾಂತನಪುರ ಗ್ರಾಮದ ಸರ್ವೆ ನಂ 9 ರಲ್ಲಿನ 263 ಎಕರೆ ಜಮೀನಿಗೆ
ಸಂಬಣಂಧಪಟ್ಟಂತೆ 24 ಎಕರೆಯನ್ನು ಸರ್ಕಾರದ ವಶಕ್ಕೆ ಪಡೆದಿದ್ದನ್ನು ಪ್ರಶ್ನಿಸಿ ಶರತ್ ಬಚ್ಚೇಗೌಡ ಕುಟುಂಬದವರು ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ಈಗ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ. ಶಾಸಕ ಶರತ್ ಬಚ್ಚೇಗೌಡ ಹಾಗೂ ಅವರ ಕುಟುಂಬದವರಿಗೆ ನೈತಿಕತೆ ಇದ್ದರೆ ಜಮೀನನ್ನು ಸರ್ಕಾರದ ವಶಕ್ಕೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.