ಸುದ್ದಿಮೂಲ ವಾರ್ತೆ
ಬೆಂಗಳೂರು,ನ.30: ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಆಸ್ಪತ್ರೆಗಳು ಸೇರಿದಂತೆ ಜನರ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಬೇಕು. ಕೇವಲ ಬಾಯಿ ಮಾತಿನಲ್ಲಿ ತೌಡು ಕುಟ್ಟಿದರೆ ಸಾಲದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್ ಗಳನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದರು.
ಆರೋಗ್ಯ ವ್ಯವಸ್ಥೆ ರಾಜ್ಯದ ಎಲ್ಲಾ ಭಾಗದಲ್ಲಿಯೂ ಉತ್ತಮವಾಗಿರಬೇಕು. ಅದರಲ್ಲೂ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿ ಮಾಡಬೇಕು. ಬೆಳಗಾವಿ ವಿಧಾನಮಂಡಲ ಅಧಿವೇಶನ ಹತ್ತಿರವಾಗುತ್ತಿದೆ. ಸರ್ಕಾರ ಎಲ್ಲರಿಗೂ ಉತ್ತರ ಕೊಡಬೇಕು. ಕೇವಲ ಬಾಯಿ ಮಾತಿನಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ತೌಡು ಕುಟ್ಟಿದರೆ ಆಗುವುದಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಅವರತ್ತ ನೋಡಿ ಸಲಹೆ ಮಾಡಿದರು.
ಜನರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕಳೆದುಕೊಳ್ಳಬಾರದು, ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು ಎನ್ನುವುದು ಸರ್ಕಾರದ ಗುರಿ. ಹಳೆ ಬಟ್ಟೆ-ಕೊಳಕು ಬಟ್ಟೆ ಹಾಕಿಕೊಂಡು ಬರುವ ಬಡವರನ್ನೂ ಮಾನವೀಯವಾಗಿ ನಡೆಸಿಕೊಂಡು ತಾರತಮ್ಯ ಇಲ್ಲದ ಉತ್ತಮ ಆರೋಗ್ಯ ಸೇವೆ ನೀಡಿ ಎಂದು ವೈದ್ಯರಿಗೆ ಕಿವಿಮಾತು ಹೇಳಿದರು.
ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂಥಾಗಬಾರದು ಎನ್ನುವ ಕಾರಣಕ್ಕೇ ತುರ್ತು 108 ಆ್ಯಂಬುಲೆನ್ಸ್ ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ರಾಜ್ಯದಲ್ಲಿ 840 ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಗಳ ಅಗತ್ಯವಿದೆ. ಪ್ರತೀ ತಾಲ್ಲೂಕಿನಲ್ಲಿ 4 ಆ್ಯಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಾ ಪ್ರತೀ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ. ಪ್ರಾಥಮಿಕ ತುರ್ತು ಚಿಕಿತ್ಸೆ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ವಿವರಿಸಿದರು.
ಖಾಸಗಿ ಡಯಾಗ್ನಸ್ಟಿಕ್ ಸೆಂಟರ್ಗಳಲ್ಲಿ ಸೇವಾವೆಚ್ಚ ದುಬಾರಿ ಆಗಿರುವುದರಿಂದ ಬಡವರಿಗೆ ಬಹಳ ಕಷ್ಟ ಆಗುತ್ತಿದೆ. ಹಾಗಾಗಿ ಪ್ರತೀ ಜಿಲ್ಲೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕು. ಹಿಂದಿನ ಸರ್ಕಾರ ಇದನ್ನು ಮಾಡಬೇಕಿತ್ತು. ಆದರೆ, ಮಾಡಿಲ್ಲ. ನಮ್ಮ ಸರ್ಕಾರ ಉತ್ತಮ ಆರೋಗ್ಯ ಸೇವೆ ಒದಗಿಸಲು ಬದ್ಧತೆ ಹೊಂದಿದೆ ಎಂದು ಹೇಳಿದರು.
ಆಂಬ್ಯುಲೆನ್ಸ್ ಸೇವೆ ಉತ್ತಮವಾಗಿರಲಿಲ್ಲ:
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ನಾನು ಆರೋಗ್ಯ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪರಿಶೀಲನೆ ಮಾಡಿ ನೋಡಿದಾಗ 108 ಆಂಬ್ಯುಲೆನ್ಸ್ ಸೇವೆ ಉತ್ತಮವಾಗಿರಲಿಲ್ಲ. ಆಧುನಿಕ ತಂತ್ರಜ್ಞಾನದ ಅಳವಡಿಕೆ, ಗುಣಮಟ್ಟ ವೃದ್ಧಿಯಾಗಿರಲಿಲ್ಲ. ಅಪಘಾತ ಸೇರಿದಂತೆ ತುರ್ತು ಸಂದರ್ಭದಲ್ಲಿ ನೆರವಿಗೆ ಬರುವ ಆಂಬ್ಯುಲೆನ್ಸ್ಗಳಿಗೆ ಗುಣಮಟ್ಟ ಹೆಚ್ಚಳದಲ್ಲಿ ಕಾಯಕಲ್ಪ ನೀಡುವುದು ನಮ್ಮ ಪ್ರಮುಖ ಆದ್ಯತೆಯಾಗಿತ್ತು. ಹಳೆಯದಾಗಿದ್ದ 262 ಆಂಬ್ಯುಲೆನ್ಸ್ಗಳನ್ನು ವಾಪಸ್ ಪಡೆದು ಅವುಗಳನ್ನು ನವೀಕೃತ ಮಾಡಿ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಆಂಬ್ಯುಲೆನ್ಸ್ ಸೇವೆ ಇದೆ ಎಂಬುದನ್ನು ಅಧಿಕಾರಿಗಳ ತಂಡ ಪರಿಶೀಲಿಸಿ ವರದಿ ನೀಡಲಿದ್ದಾರೆ. ವರದಿ ಬಳಿಕ ಆಂಬ್ಯುಲೆನ್ಸ್ ಸೇವೆಯನ್ನು ಮತ್ತಷ್ಟು ಉತ್ತಮಪಡಿಸಲಾಗುವುದು ಎಂದರು.
ಹೆದ್ದಾರಿಗಳಲ್ಲಿ ಟ್ರಾಮಾ ಸೆಂಟರ್ ಸ್ಥಾಪಿಸುವ ಉದ್ದೇಶ ಹೊಂದಾಗಿದೆ. ಯಾವುದೇ ಅಪಘಾತಗಳು ಸಂಭವಿಸಿದಾಗ ಇಲ್ಲಿ ತುರ್ತು ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಗೆ ರವಾನಿಸಲಾಗುವುದು. ಇದರಿಂದ ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಪ್ರಾಣ ಬಿಡುವ ಅಪಾಯಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ ಅನಿಲ್ಕುಮಾರ್, ಆಯುಕ್ತ ರಂದೀಪ್ , ನಿರ್ದೇಶಕಿ ಡಾ.ಬಿ.ಎಸ್. ಪುಷ್ಪಲತಾ ಹಾಜರಿದ್ದರು.
‘ಆಬ್ಯುಲೆನ್ಸ್ ಚಾಲಕರು- ಖಾಸಗಿ ಆಸ್ಪತ್ರೆಗಳ ಒಪ್ಪಂದ’
108 ಆಬ್ಯುಲೆನ್ಸ್ ಚಾಲಕರು ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಯನ್ನು ಸರ್ಕಾರಿ ಆಸ್ಪತ್ರೆಗೆ ತಲುಪಿಸುವ ಬದಲು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಅಪಘಾತ, ಹೃದಯಾಘಾತ ಹೀಗೆ ತುರ್ತು ಸಂದರ್ಭದಲ್ಲಿ ಕುಟುಂಬದವರು ಗಾಬರಿಯಾಗಿರುತ್ತಾರೆ. ಅವರಿಗೆ ಯಾವ ಆಸ್ಪತ್ರೆಗೆ ಹೋಗಬೇಕು ಎಂಬ ಮಾಹಿತಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ 108 ಆಂಬ್ಯುಲೆನ್ಸ್ ಚಾಲಕರು ಸೂಕ್ತ ಚಿಕಿತ್ಸೆ ಸಿಗುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು. ಆದರೆ, ಅವರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಬಳಿಕ ಲಕ್ಷ ಲಕ್ಷ ಬಿಲ್ ಬರುತ್ತದೆ. ಅದೇ ಬಿಲ್ಗಳನ್ನು ಹಿಡಿದು ಜನ ನಮ್ಮ ಬಳಿಗೆ ಬರುತ್ತಾರೆ. ಶಾಸಕರಿಗೆ ಇಂತಹ ಆಸ್ಪತ್ರೆಗಳ ಬಿಲ್ ನೋಡಿ ಸಾಕಾಗಿದೆ. ಬಳಿಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸುತ್ತೇವೆ. ಕೆಲವೊಮ್ಮೆ ನಾನು ಸುಮಾರು 20 ಲಕ್ಷದವರೆಗೂ ಇಂತಹ ಆಸ್ಪತ್ರೆ ಬಿಲ್ಗಳನ್ನು ಕೊಡುವುದಕ್ಕೆ ಹಣ ಕಳೆದುಕೊಂಡಿದ್ದೇವೆ ಎಂದು ಹೇಳಿದರು.
ಆಂಬ್ಯುಲೆನ್ಸ್ ಚಾಲಕರಿಗೆ ಸೂಕ್ತ ತರಬೇತಿ ನೀಡಬೇಕು. ವಿಕ್ಟೋರಿಯಾ, ಬೌರಿಂಗ್, ಜಯದೇವ ಮುಂತಾದ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ. ಅಲ್ಲಿಗೆ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಯನ್ನು ಕರೆದೊಯ್ದರೆ ಅವರ ಕುಟುಂಬಕ್ಕೂ ಸಹ ಸಹಕಾರಿ ನೀಡಿದಂತಾಗುತ್ತದೆ ಎಂದು ಹೇಳಿದರು.