ಸುದ್ದಿಮೂಲ ವಾರ್ತೆ
ತುಮಕೂರು, ಏ.17: ಕವಿ ತನ್ನ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯಬೇಕು. ಭಾಷೆಯಲ್ಲಿ ಗಟ್ಟಿತನವಿದ್ದರೆ ಮಾತ್ರ ಕಾವ್ಯ ಗಟ್ಟಿಯಾಗುತ್ತದೆ ಎಂದು ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅಭಿಪ್ರಾಯಪಟ್ಟರು.
ನಗರದ ಓಶೋ ಧ್ಯಾನ ಕೇಂದ್ರದಲ್ಲಿ ಭಾನುವಾರ ಕರ್ನಾಟಕ ಲೇಖಕಿಯರ ಸಂಘ ತುಮಕೂರು ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ನಡೆದ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅವರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿ ಅನುಭವ ಪ್ರಾಮಾಣಿಕನಾಗಿದ್ದರೆ ಅವನಿಗೆ ಪದಗಳನ್ನು ಹುಡುಕುವ ಕಷ್ಟವೇ ಇರುವುದಿಲ್ಲ. ಪದಗಳು ತಾವೇ ಕವಿಯನ್ನು ಹುಡುಕಿಕೊಳ್ಳುತ್ತವೆ. ಕವಿ ಹೆಚ್ಚು ಹೆಚ್ಚು ಓದುವುದರಿಂದ ಪದ ಸಂಪತ್ತು ಬೆಳೆಯುತ್ತದೆ. ನಮ್ಮ ಸುತ್ತಮುತ್ತ ಇದ್ದ ಮಹಿಳೆಯರೆಲ್ಲ ಗಟ್ಟಿಗಿತ್ತಿಯರೇ, ದಿಟ್ಟರಲ್ಲಿ ದಿಟ್ಡೆಯಾದವಳು ನನ್ನ ತಾಯಿ. ಇರ್ಯಾರು ಸ್ತ್ರೀವಾದವನ್ನು ಮಾತನಾಡಲಿಲ್ಲ, ಆದರೆ ಸ್ತ್ರೀವಾದವನ್ನು ಜೀವಿಸಿದ್ದರು. ಅವರೇ ನನ್ನ ಕಾವ್ಯಕ್ಕೆ ಸ್ಪೂರ್ತಿ ಎಂದರು.
ಕಾರ್ಯಕ್ರಮದ ಸಂಚಾಲಕಿ ಡಾ. ಆಶಾರಾಣಿ ಬಗ್ಗನಡು ಮಾತನಾಡಿ, ಮಾತು ಮಾರೆಯಾಗುತ್ತಿರುವ ದುರಿತ ಕಾಲದಲ್ಲಿ ನಮ್ಮನಮ್ಮ ಚಿಂತನೆಗಳನ್ನು ಗಟ್ಟಿಗೊಳಿಸಿಕೊಳ್ಳಲು ಸಂವಾದಗಳು ಅತ್ಯಂತ ಅಗತ್ಯ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿರುವ, ಲಲಿತಾ ಸಿದ್ಧಬಸವಯ್ಯನವರು ತಮ್ಮ ಕಾವ್ಯದ ಮೂಲಕ ಅವೈದಿಕ ನೆಲೆಯ ಸ್ತ್ರೀ ಭಾವನೆಗಳನ್ನು ಸೂಕ್ತವಾಗಿ ಪ್ರತಿಬಿಂಬಿಸಿದ್ದಾರೆ. ಇವರ ಕವನಗಳ ಮೂಲಕ ತಾಯ್ತನದ ಘನತೆಯನ್ನು, ಹೆಣ್ಣು ದೇಹದ ಭಾಷೆಯನ್ನು ಬಿತ್ತರಿಸುವ ಕೆಲಸವನ್ನು ಮಾಡಿದ್ದಾರೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಲಲಿತಾ ಸಿದ್ಧಬಸವಯ್ಯನವರ ಕಾವ್ಯ ಸಮಾಜದ ಎಲ್ಲಾ ಸ್ಥರಗಳ ಮಹಿಳೆಯರನ್ನು ಮುಟ್ಟಿದ್ದು, ಎಲ್ಲ ಮಹಿಳೆಯರ ಭಾಷೆಯೂ ಇವರ ಕಾವ್ಯದಲ್ಲಿದೆ ಇಂತವರೊಂದಿಗಿನ ಸಂವಾದ ನಿಜಕ್ಕೂ ಅವಶ್ಯಕ ಮತ್ತು ಅರ್ಥಪೂರ್ಣ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಸುಮಾ ಬೆಳೆಗೆರೆಯವರ 5 ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ 30 ಮಂದಿ ಕವಿಗಳು ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಗಾಯಕಿ ಪಾರ್ವತಮ್ಮ ರಾಜ್ಕುಮಾರ್, ಡಾ. ಸಿದ್ಧಬಸವಯ್ಯ, ಗುಬ್ಬಚ್ಚಿ ಸತೀಶ್, ವಿಶ್ವನಾಥ್, ರಂಗಮ್ಮ ಹೊದೇಕಲ್, ಡಾ ಪ್ರಿಯಾಂಕ ಎಂ. ಜಿ., ಡಾ. ರಜನಿ, ಮರಿಯಂಬೀ, ಸಲೀಂ ಖಾನ್, ದೀಪಿಕಾ ಬಾಬು, ಮಧು ಡಿ.ಎನ್. ಮುಂತಾದವರ ಹಾಜರಿದ್ದರು.