ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾರ್ಥಕ ಬದುಕು:ಶಿವಶರಣಪ್ಪ ಮೂಳೆಗಾಂವ
ಜೇವರ್ಗಿ:ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿರುವ ಪಠ್ಯ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಲ್ಲ. ಅದರಲ್ಲಿ ನೀವು ಬದುಕನ್ನು ಕಟ್ಟಿಕೊಳ್ಳುವ ಮಾರ್ಗವಿದೆ. ಅದನ್ನು ಹುಡುಕುವ ಕೆಲಸ ಮಾಡಬೇಕು. ಒಂದು ವೇಳೆ ಶೈಕ್ಷಣಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ತೊಂದರೆಯಿಲ್ಲ. ಆದರೆ ಜೀವನದ ಪರೀಕ್ಷೆಯಲ್ಲಿ ಫೇಲಾದರೆ ಜೀವನ ವ್ಯರ್ಥವಾಗುತ್ತದೆ ಎಂದು ಪಪೂಶಿ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕಾಲೇಜಿನ ವಾರ್ಷಿಕೋತ್ಸವ, ದ್ವಿತೀಯ ಪಿಯು ವಿದ್ಯಾರ್ಥಿಗಳ ಬಿಳ್ಕೋಡುಗೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಶಿಕ್ಷಕರು, ಪಾಲಕ-ಪೋಷಕ ವರ್ಗದವರು ಮಾರ್ಗದರ್ಶನ ಮಾಡಬಹುದೇ ಹೊರತು, ಜೀವನ ನಿರ್ಮಿಸಲು ಸಾಧ್ಯವಿಲ್ಲ. ನೀವು ಸ್ವಯಂ ಶಿಲ್ಪಿಗಳಾಗಬೇಕು. ಮೌಢ್ಯತೆ, ಕಂದಾಚಾರದಿoದ ಹೊರಬನ್ನಿ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ. ಶಕ್ತಿಶಾಲಿಗಳಾಗಿ, ನಿರಂತರ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವಂತೆ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಯಡ್ರಾಮಿ ವಿರಕ್ತ ಮಠದ ಪೂಜ್ಯ ಸಿದ್ದಲಿಂಗ ಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ದೇಶಪ್ರೇಮ, ಭ್ರಾತೃತ್ವ ಭಾವನೆ ಮೈಗೂಡಿಸಿಕೊಳ್ಳಿ. ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡಿ. ಯಾರೇ ಆಗಲಿ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ. ಸೂಕ್ತ ಯೋಚನಾ ಶಕ್ತಿ ಇರಲಿ. ಸ್ವಾರ್ಥ ಜೀವನಕ್ಕಿಂತ, ಸಾರ್ಥಕ ಜೀವನ ಶ್ರೇಷ್ಠವಾಗಿದೆ. ಅಂಕಪಟ್ಟಿಯಿoದ ಮಾತ್ರ ಜೀವನ ನಿರ್ಧಾರವಾಗದು. ಅನೇಕ ಮಹನೀಯರ ಜೀವನ, ಸಾಧನೆಯ ದೃಷ್ಟಾಂತಗಳೊoದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
ಸಿಬಿಸಿ ಉಪಾಧ್ಯಕ್ಷ ರವೀಂದ್ರಕುಮಾರ ವೈ.ಕೋಳಕೂರ್, ಪ್ರಾಚಾರ್ಯರುಗಳಾದ ಮೊಹ್ಮದ ಅಲ್ಲಾಉದ್ದೀನ ಸಾಗರ, ಬಸವರಾಜ ಬಿರಾಜಾದಾರ, ಶಿವಶರಣಪ್ಪ ಮಸ್ಕನಳ್ಳಿ, ಶ್ರೀಶೈಲ್ ಖಣದಾಳ, ಅಮಿನಪ್ಪ ಹೊಸಮನಿ, ಪಿಎಸ್ಐ ಶಿವರಾಜ ಪಾಟೀಲ, ಪ್ರಮುಖರಾದ ಶಾಂತಪ್ಪ ಜೈನ್, ಶರಣು ಹಿರೇಮಠ ವೇದಿಕೆ ಮೇಲಿದ್ದರು.
ರವೀಂದ್ರಕುಮಾರ ಬಟಗೇರಿ, ನಯಿಮಾ ನಾಹಿದ್, ಶರಣಮ್ಮ ಭಾವಿಕಟ್ಟಿ, ಶಂಕ್ರೆಪ್ಪ ಹೊಸದೊಡ್ಡಿ, ಎಚ್.ಬಿ.ಪಾಟೀಲ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ರಾಮಚಂದ್ರ ಟಿ.ಹಕ್ಕಿ, ಸಿದ್ದಾರೂಢ ಬಿರಾದಾರ, ದೇವೇಂದ್ರಪ್ಪ ಬಡಿಗೇರ್, ನೇಸರ ಎಂ.ಬೀಳಗಿಮಠ, ರಂಜಿತಾ ಠಾಕೂರ, ಸಮೀನಾ ಬೇಗಂ, ಮಂಜುನಾಥ ಅಳ್ಳಗಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಿತು. ವಿದ್ಯಾರ್ಥಿಗಳು ಸಮಸ್ತ ಸಿಬ್ಬಂದಿಗೆ ಸತ್ಕರಿಸಿದರು. ದ್ವಿತೀಯ ಪಿಯು ಎಲ್ಲಾ ವಿದ್ಯಾರ್ಥಿಗಳಿಗೆ ಪುಷ್ಪವೃಷಿಯ ಮೂಲಕ ಶುಭಾಷಯ ಕೋರಿ, ಬಿಳ್ಕೋಡಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.