ಸುದ್ದಿಮೂಲ ವಾರ್ತೆ
ಮೈಸೂರು, ಜು. 21:ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜಿಲ್ಲೆಯಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಮುಂದುವರಿದಿದ್ದು, ಕಾಡಾನೆ, ಚಿರತೆ ಮತ್ತು ಹುಲಿಗಳ ಉಪಟಳ ತೀವ್ರಗೊಂಡಿದೆ.
ರೈತರು ಜಮೀನುಗಳಿಗೆ ಹೋಗಲು ಮತ್ತು ಶಾಲಾ ಮಕ್ಕಳು ಶಾಲೆಗೆ ಹೋಗಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಒಂದು ಕಡೆ ಜಮೀನಿಗೆ ಹಾಕಿದ ವಿದ್ಯುತ್ ಬೇಲಿ ಸ್ಫರ್ಶದಿಂದ ಆನೆಗಳು ಮತ್ತು ಉರುಳಿನಿಂದ ಚಿರತೆ ಮತ್ತು ಹುಲಿಗಳು ಸಾವನ್ನಪ್ಪುತ್ತಿದ್ದರೇ, ಜನರು ಕಾಡಾನೆ, ಚಿರತೆಗಳು ಮಾಡುವ ದಾಳಿಗೆ ತುತ್ತಾಗುತ್ತಿದ್ದಾರೆ. ಹೀಗೆ ಮಾನವ ಮತ್ತು ಕಾಡಿನ ಜೀವಗಳ ನಡುವೆ ನಿರಂತರ ಸಂಘರ್ಷ ನಡೆಯುತ್ತಲೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಇದೆಯೇ ? ಎಂಬ ಪ್ರಶ್ನೆ ಉಳಿದಿದೆ.
ಪ್ರಾಣಿಗಳಿಂದ ಮಾನವರಿಗೆ ಸಾವು, ನೋವು ಆದಾಗ ಒಂದಷ್ಟು ಪರಿಹಾರ ಘೋಷಣೆ ಮಾಡುವುದು ಮತ್ತು ಜಮೀನಿಗಳಲ್ಲಿ ಪ್ರಾಣಿಗಳ ಸತ್ತಾಗ ಕೇಸು ದಾಖಲಿಸಿಕೊಳ್ಳುವುದು ಮಾತ್ರ ಮುಂದುವರಿದಿದೆ. ಆದರೆ, ಅದನ್ನು ತಪ್ಪಿಸಲು ಯಾವುದೇ ಬಗೆಯ ಶಾಶ್ವತ ಪರಿಹಾರ ಮರೀಚಿಕೆ ಆಗಿದೆ. ಕಾಡಂಚಿನಲ್ಲಿ ಕಬ್ಬಿಣದ ಬೇಲಿ ನಿರ್ಮಾಣ, ಕಂದಕ ತೊಡುವುದು ಸೇರಿದಂತೆ ಹಲವು ಯೋಜನೆಗಳ ಮೂಲಕ ಕಾಡು ಪ್ರಾಣಿಗಳ ಹಾವಳಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆಯೇ ಹೊರತು ಪರಿಣಾಮಕಾರಿಯಾಗಿ ಕಾರ್ಯಗತವಾಗುತ್ತಿಲ್ಲ.
ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರಾವರಿ ಪ್ರದೇಶವನ್ನು ಹೊಂದಿರುವ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಇಲ್ಲಿಯ ಗದ್ದೆಗಳಲ್ಲಿ ಬೀಡು ಬೀಡುವ ಚಿರತೆಗಳು ಕೆಲ ದಿನಗಳ ಹಿಂದೆ ಇಬ್ಬರು ಮಹಿಳೆಯರು ಸೇರಿದಂತೆ ಆನೇಕ ಮಂದಿಯ ಮೇಲೆ ದಾಳಿ ಮಾಡಿದ್ದವು. ಅದರಲ್ಲಿ ಇಬ್ಬರು ಮೃತಪಟ್ಟಿದ್ದರು. ಇದೇ ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಕಾಡಾನೆಗಳು, ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಜಮೀನಿಗೆ ಹೋಗಿದ್ದ ರೈತರ ಮೇಲೆ ದಾಳಿ ನಡೆಸುತ್ತಿವೆ.
ನಾಗರಹೊಳೆ, ಬಂಡೀಪುರ ಹಾಗೂ ಕೇರಳದ ವಯನಾಡು ರಾಷ್ಟ್ರೀಯ ಉದ್ಯಾನಗಳೊಂದಿಗೆ ಗಡಿ ಹಂಚಿಕೊಂಡಿರುವ ಎಚ್.ಡಿ.ತಾಲೂಕಿನಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಂತೂ ಕಾಡು ಪ್ರಾಣಿಗಳ ಉಪಟಳ ಹೇಳತೀರದು. ಇಲ್ಲಿ ಚಿರತೆಗಳು ಶಾಲಾ ಆವರಣದಲ್ಲೇ ಓಡಾಡಿದ್ದು ಇದೆ. ವನ್ಯಜೀವಿ ದಾಳಿಗೆ ಮಾನವರ ಸಾವು ಹಾಗೂ ಗಾಯದ ಪ್ರಮಾಣವೂ ಹೆಚ್ಚಾಗಿದ್ದರೆ, ಕಾಡು ಜೀವಗಳು ಆಹಾರ ಅರಸಿ ಬಂದು ಜೀವ ಕಳೆದುಕೊಳ್ಳುತ್ತಿವೆ. ಆಹಾರಕ್ಕಾಗಿ ಕಾಡಿನಿಂದ ನಾಡಿನತ್ತ ಬರುವ ವನ್ಯಜೀವಿಗಳ ಸಾವು ನಿಲ್ಲುತ್ತಿಲ್ಲ.
15 ದಿನಗಳ ಹಿಂದೆಯಷ್ಟೇ ನಾಗರಹೊಳೆ ಸಮೀಪ ಕಾಡಾನೆ ವಿದ್ಯುತ್ಗೆ ತಂತಿ ಸ್ಪರ್ಶದಿಂದ ಇಹಲೋಕ ತ್ಯಜಿಸಿತ್ತು. ಈಗ ಜು. 20 ರಂದು ಚಿರತೆ ಮರಿಯೊಂದು ಜೀವ ಬಿಟ್ಟಿದೆ. ಆಹಾರ ಹುಡುಕುತ್ತಾ ಹೊರಟ ಚಿರತೆ ಮರಿ ಉರುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದೆ. ಜಮೀನಿಗೆ ಕಾಡು ಹಂದಿಗಳು ಬಾರದಂತೆ ತಡೆಯಲು ದೊಡ್ಡಉರುಳು ಇರಿಸಲಾಗಿತ್ತು. ಗುರುವಾರ ಇದೇ ಮಾರ್ಗದಲ್ಲಿ ಆಹಾರ ಅರಸಿ ಬಂದಿರುವ ಒಂದೂವರೆ ವರ್ಷದ ಚಿರತೆ ಮರಿ ಉರುಳಿಗೆ ಸಿಲುಕಿಕೊಂಡಿದೆ. ಕತ್ತಿನ ಭಾಗಕ್ಕೆ ಉರುಳು ಬಿದ್ದಿದ್ದರಿಂದ ಅದಕ್ಕೆ ತಪ್ಪಿಸಿಕೊಳ್ಳಲು ಆಗಿಲ್ಲ. ಸಾಕಷ್ಟು ಪ್ರಯತ್ನ ಪಟ್ಟರೂ ಅದರಿಂದ ಹೊರ ಬರಲಾಗದೇ ಉಸಿರುಗಟ್ಟಿ ಮೃತಪಟ್ಟಿದೆ.
ಕ್ರಮ ವಹಿಸಲಾಗಿದೆ
ನಾಡಿನ ಜನರು ಮತ್ತು ಕಾಡು ಪ್ರಾಣಿಗಳ ನಡುವೆ ನಡುವೆ ನಡೆಯುತ್ತಿರುವ ಸಾವು, ನೋವುಗಳನ್ನು ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮಾನವರು ಕಬ್ಬಿಣದ ತಂತಿಯಿಂದ ತಯಾರಿಸಿದ್ದ ಉರುಳಿಗೆ ಚಿರತೆ ಸಿಲುಕಿ ಮೃತಪಟ್ಟಿದೆ.
ಪ್ರಸನ್ನ, ಆರ್ಎಫ್ಒ .
ಕಾರ್ಯಗತವಾಗುವುದಿಲ್ಲ
ಎರಡು ಕಡೆಯಿಂದ ನಡೆಯುತ್ತಿರುವ ಹಾನಿಯನ್ನು ತಡೆಯಲು ಬೇಕಾದ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿಲ್ಲ. ಇದು ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ನಡೆಯುತ್ತಿರುವ ಸಂಘರ್ಷ ಮುಂದುವರಿಯಲು ಕಾರಣವಾಗಿದೆ.
ಜೆ.ಮಹದೇವ, ಸಂಚಾಲಕರು, ಮಾನವ ಹಿತರಕ್ಷಣಾಸಮಿತಿ, ಹುಣಸೂರು ತಾಲೂಕು.