ಸುದ್ದಿಮೂಲ ವಾರ್ತೆ
ಮೈಸೂರು, ಜೂ. 12 : ಇಲ್ಲಿನ ಇತಿಹಾಸ ಪ್ರಸಿದ್ಧ ಚಾಮುಂಡಿಬೆಟ್ಟದಲ್ಲಿ ಜೂನ್ 23 ರಿಂದ ಆರಂಭವಾಗುವ ಈ ಬಾರಿಯ ಆಷಾಡ ಶುಕ್ರವಾರದ ಕಾರ್ಯಕ್ರಮ ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ .ಸಿ ಮಹದೇವಪ್ಪ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಭಕ್ತರಿಗೆ ಅನುಕೂಲವಾಗುವ ಮಾದರಿಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ವ್ಯವಸ್ಥೆಗೊಳಿಸಬೇಕು ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವಿದೆ ಹೀಗಾಗಿ ಭಕ್ತರಿಗೆ ಯಾವುದೇ ಅಡಚಣೆ ಉಂಟಾಗದಂತೆ ಕೆಲಸ ನಿರ್ವಹಿಸಿ ಎಂದು ಸಚಿವರು ತಿಳಿಸಿದರು.
ಚಾಮುಂಡಿ ಬೆಟ್ಟ ಚಾಮುಂಡೇಶ್ವರಿ ದೇವಸ್ಧಾನದಲ್ಲಿ 2023ನೇ ಆಷಾಢ ಶುಕ್ರವಾರಗಳು ಹಾಗೂ ಅಮ್ಮನವರ ಜನ್ಮೋತ್ಸವ ಅಂಗವಾಗಿ ಕೈಗೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.
ಈ ಹಿಂದೆ ನಡೆದಿರುವ ಕ್ರಮಗಳನ್ನ ಅನುಸರಿಸಿ, ಯಾವುದು ಲೋಪವಿದಿಯೋ ಅಂತಹ ವ್ಯವಸ್ಥೆಗಳನ್ನ ಬಿಟ್ಟು ಜನರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಎನ್.ಆರ್ ಕ್ಷೇತದ ಶಾಸಕರಾದ ತನ್ವಿರ್ ಸೇಠ್, ಹರೀಶ್ ಗೌಡ, ಶ್ರೀವತ್ಸ, ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬನೋತ್, ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.