ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.31: ಕರ್ನಾಟಕ ಹೆಮ್ಮೆಯ ಸಂಸ್ಥೆ ಕೆಎಂಎಫ್ನ ನಂದಿನಿ ಪ್ರೋಬಯೋಟೆಕ್ ಮೊಸರಿನ ಪಾಕೆಟ್ಗಳ ಮೇಲೆ ಹಿಂದಿ ಪದ ‘ದಹಿ’ ಎಂದು ಬರೆಯಬೇಕು ಎಂಬ ಆದೇಶಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಲಾಗಿದೆ.
ರಾಜ್ಯಗಳ ಹಾಲು ಒಕ್ಕೂಟಗಳಿಗೆ ಮೊಸರಿನ ಪಾಕೆಟ್ ಮೇಲೆ ದಹಿ ಎಂದು ಆಯಾ ಪ್ರಾದೇಶಿಕ ಭಾಷೆಯಲ್ಲಿ ಬರೆಯಬೇಕು ಎಂದು ಇತ್ತೀಚೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅದರಂತೆ ಕೆಲ ದಿನಗಳ ಕಾಲ ನಂದಿನಿ ಮೊಸರಿನ ಪಾಕೆಟ್ ಮೇಲೆ ‘ದಹಿ’ ಎಂದು ಬರೆಯಲಾಗಿತ್ತು.
ನಂದಿನಿ ಮೊಸರಿನ ಪಾಕೆಟ್ಗಳ ಮೇಲೆ ಹಿಂದಿ ಪದ ದಹಿ ಎಂದು ಬರೆದಿರುವುದಕ್ಕೆ ಕನ್ನಡಪರ ಸಂಘಟನೆಗಳು, ರಾಜಕೀಯ ನಾಯಕರು ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲಲ್ಲಿ ಪ್ರತಿಭಟನೆಗಳನ್ನೂ ಸಹ ನಡೆಸಲಾಯಿತು.
ಈ ಮಧ್ಯೆ ತಮಿಳುನಾಡಿನಲ್ಲಿ ಸಹ ಪ್ರತಿಭಟನೆಯ ಕಾವು ಏರಿಕೆಯಾಗಿತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಎಫ್ಎಸ್ಎಸ್ಎಐನ ಈ ಕ್ರಮ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಏರಿಕೆಯ ಕ್ರಮವಾಗಿದೆ ಎಂದು ಟೀಕಿಸಿದ್ದರು. ಅಲ್ಲದೆ, ಈ ಆದೇಶವನ್ನು ತಮಿಳುನಾಡಿನಲ್ಲಿ ಪಾಲಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಹ ದಹಿ ಎಂಬ ಪದಬಳಕೆ ಕಡ್ಡಾಯ ಮಾಡಿರುವುದನ್ನು ಖಂಡಿಸಿದ್ದರು.
ಹೀಗೆ ದಹಿ ಪದ ಬಳಸುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಫ್ಎಸ್ಎಸ್ಎಐ ಗುರುವಾರ ಪರಿಷ್ಕೃತ ಆದೇಶ ಹೊರಡಿಸಿದ್ದು, ‘ಕರ್ಡ್’ ಎಂಬ ಇಂಗ್ಲಿಷ್ ಪದದ ಜೊತೆಗೆ ಆಯಾ ರಾಜ್ಯಗಳ ಪ್ರಾದೇಶಿಕ ಹೆಸರನ್ನು ಮುದ್ರಿಸಬಹುದು ಎಂದು ಹೇಳಿದೆ.
ಹಿಂದಿ ಹೇರಿಕೆ ಮೂಲಕ ನಂದಿನಿ ಮುಳುಗಿಸಲು ಸಂಚು
ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸುವುದನ್ನು ಕೆಎಂಎಫ್ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಂದಿನಿಯನ್ನು ಬ್ರಾಂಡ್ ಅನ್ನು ಹಳ್ಳ ಹಿಡಿಸಲು ವ್ಯವಸ್ಥಿತ ಸಂಚು ಹೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ನಂದಿನಿಯು ಅಮುಲ್ ಅಡಿಯಾಳು ಅಲ್ಲ, ಕರ್ನಾಟಕವು ಗುಜರಾತಿನ ವಸಾಹತು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು, ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ.
ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ. ಇದು ಗೊತ್ತಿದ್ದರೂ ಹಿಂದಿ ಹೇರಿಕೆಯ ಅಹಂ ತೋರಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದ ಸಭೆಯೊಂದರಲ್ಲಿ, ಗುಜರಾತಿನ ಅಮುಲ್ ಜತೆ ನಂದಿನಿಯನ್ನು ವಿಲೀನ ಮಾಡುವುದಾಗಿ ಹೇಳಿದ್ದರು. ಹಿಂದಿ ಪದ ಮುದ್ರಣ ನಂದಿನಿ ಹೈಜಾಕಿನ ಅರಂಭವಾ? ಎಂದು ಪ್ರಶ್ನಿಸಿದ್ದಾರೆ.
ಶಾ ಅವರ ಹೇಳಿಕೆಯನ್ನು ಕನ್ನಡಿಗರು ಖಂಡಿಸಿದ್ದರು. ನಾನೂ ವಿರೋಧಿಸಿದ್ದೆ. ಆಮೇಲೆ ಸುಮ್ಮನಾಗಿದ್ದ ಕೇಂದ್ರ ಬಿಜೆಪಿ ಸರಕಾರ, ಈಗ ಆಹಾರ ಸುರಕ್ಷತಾ ಪ್ರಾಧಿಕಾರದ ಮೂಲಕ ಹಿಂಬಾಗಿಲಿನಿಂದ ಮೊಸರಿನ ಪಕ್ಕ ದಹಿ ಸೇರಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ಸಡ್ಡು ಹೊಡೆದಿದೆ. ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?
ಕನ್ನಡಕ್ಕೆ ಕೊಕ್ಕೆ ಹಾಕಿ ಹಿಂದಿಯನ್ನು ಮೆಲ್ಲಗೆ ಹೇರಿ ಇಡೀ ನಂದಿನಿ ಪದಾರ್ಥಗಳನ್ನು ಹಳ್ಳ ಹಿಡಿಸುವುದು ಇದರ ಹಿಂದಿರುವ ಘೋರ ಷಡ್ಯಂತ್ರ. ಆಮೇಲೆ, ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಎಂದು ಕಥೆ ಕಟ್ಟಿ, ಅದನ್ನು ಉಳಿಸುವ ನಾಟಕವಾಡಿ ನಂದಿನಿಯನ್ನು ಸಲೀಸಾಗಿ ಅಮುಲ್ ಜತೆಗೆ ವಿಲೀನ ಮಾಡುವ ಹುನ್ನಾರವಷ್ಟೇ ಇದು.
ಈಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಬ್ಬರೂ ಕರ್ನಾಟಕಕ್ಕೆ ಬಲು ಬಿಡುವಾಗಿ ಬಂದರು ಎಂದರೆ, ಕೇವಲ ಚುನಾವಣೆ ಉದ್ದೇಶಕ್ಕೇ ಎಂದುಕೊಂಡಿದ್ದೆ. ಆದರೆ, ಕರ್ನಾಟಕದಲ್ಲಿ ನಡೆದ ಅವರಿಬ್ಬರ ಶೋಗಳ ಸವಾರಿ ನಮ್ಮ ನಂದಿನಿಯ ಹೆಸರಿಗೇ ಕುತ್ತು ತರುತ್ತದೆ ಎಂದು ಭಾವಿಸಿರಲಿಲ್ಲ.
ಆರೂವರೆ ಕೋಟಿ ಕನ್ನಡಿಗರ ಮನೋಭಾವಕ್ಕೆ ವಿರುದ್ಧವಾಗಿ ದಹಿ ಎನ್ನುವ ಪದವನ್ನು ಮುದ್ರಿಸಿದ್ದೇ ಕೆಎಂಎಫ್ ಮಾಡಿರುವ ದೊಡ್ದ ತಪ್ಪು. ಇದು ರಾಜ್ಯ ಬಿಜೆಪಿ ಸರಕಾರದ ಗಮನಕ್ಕೆ ಬಾರದೆ ಆಗಿರುವ ಕೃತ್ಯವಲ್ಲ. ಕಾಣದ ಕೈಗಳ ಕಳ್ಳಾಟ ಇಲ್ಲಿ ಸ್ಪಷ್ಟ. ಇಲ್ಲಿ ಹಿಂಬಾಗಿಲಿನಿಂದ ಅಲ್ಲ, ನೇರವಾಗಿಯೇ ಹಿಂದಿ ಹೇರಿಕೆ ಆಗಿದೆ. ಅದನ್ನು ಡಬಲ್ ಎಂಜಿನ್ ರಾಜ್ಯ ಬಿಜೆಪಿ ಸರಕಾರ ಹಾಗೂ ಅದರ ಕೀಲುಗೊಂಬೆ ಕೆಎಂಎಫ್ ಸದ್ದಿಲ್ಲದೆ ಒಪ್ಪಿಕೊಂಡಿವೆ. ಇದು ಕನ್ನಡ ವಿರೋಧಿ ಕೆಲಸ. ತಕ್ಷಣವೇ ದಹಿ ಪದ ಮುದ್ರಿಸುವುದನ್ನು ನಿಲ್ಲಿಸಬೇಕು ಎಂದು ಅವರು ಆ್ರಹಿಸಿದ್ದರು.
The word ‘dahi’ on the pockets of Nandini Yogurt