ಇಂದು ಮೈಸೂರು- ಮಂಡ್ಯಕ್ಕೆ ರಾಜನಾಥ್ ಸಿಂಗ್, ನಾಳೆ ಮೋದಿ
ಸುದ್ದಿಮೂಲ ವಾರ್ತೆ
ಮೈಸೂರು., ಏ.28: ಜೆಡಿಎಸ್ ಭ್ರದ್ರಕೋಟಿಯಾದ ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಗೆ ಬಿಜೆಪಿಯ ಅಗ್ರಗಣ್ಯ ನಾಯಕರ ನಿರಂತರ ಪ್ರಚಾರ ಮುಂದುವರಿದಿದೆ.
ಶನಿವಾರ (ಏ.29) ಮೈಸೂರು, ಮಂಡ್ಯಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿ, ಸಾರ್ವಜನಿಕ ಸಭೆ, ರೋಡ್ ಶೋಗಳನ್ನು ನಡೆಸಲಿದ್ದಾರೆ.
ಏ. 30 ಪ್ರಧಾನಿ ಮೋದಿ ಅವರು ಕೂಡ ಮಂಡ್ಯ ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್ ಅವರು, ಅರಮನೆ ನಗರಿ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಏಪ್ರಿಲ್ 30 ರಂದು ಬೃಹತ್ ಚುನಾವಣಾ ಪ್ರಚಾರ ರ್ಯಾಲಿ ನಡೆಸುವರು. ದೆಹಲಿಯಿಂದ ನೇರವಾಗಿ ಮೈಸೂರಿನ ಮಹಾರಾಜ ಕಾಲೇಜ್ ಮೈದಾನಕ್ಕೆ ಆಗಮಿಸಲಿರುವ ಮೋದಿ ಅವರನ್ನು ಮೈಸೂರಿನ ಪಾರಂಪರಿಕ ವಸ್ತು ಗಳಾದ ವಿಳ್ಯದೆಲೆ, ಶ್ರೀ ಗಂಧದ ಕಡ್ಡಿ, ಮೈಸೂರು ಸಿಲ್ಕ್ ಬಟ್ಟೆ ನೀಡಿ ಸ್ವಾಗತಿಸಲಾಗುವುದು ಎಂದು ತಿಳಿಸಿದರು.
ನಳಿನ್ಕುಮಾರ್ ಕಟೀಲ್ ಪ್ರಚಾರ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಶುಕ್ರವಾರ ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಳಿಕೆರೆ ಗ್ರಾಮದಲ್ಲಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದರು.
ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಯನ್ನು ಗಮನಿಸಿ ಬಿಜೆಪಿಯನ್ನೇ ಬೆಂಬಲಿಸಲು ಮನವಿ ಮಾಡಿದರು.
ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಹುಣಸೂರು ವಿಧಾನಸಭಾ ಬಿಜೆಪಿ ಅಭ್ಯರ್ಥಿ ಡಿ.ಸೋಮಶೇಖರ್, ಹುಣಸೂರು ಮಂಡಲ ಅಧ್ಯಕ್ಷ ನಾಗಣ್ಣಗೌಡ ಮತ್ತಿತರರು ಇದ್ದರು.
*ಜಿ.ಟಿ.ದೇವೇಗೌಡ ಪ್ರಚಾರ*
ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಮತ್ತು ಅವರ ಪತ್ನಿ ಲಲಿತಾ ಅವರು ಕಾರ್ಯಕರ್ತರೊಡನೆ ಬಿರುಸಿನ ಪ್ರಚಾರ ಕೈಗೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡರು ಕೂಡ ಪ್ರಚಾರ ನಡೆಸುತ್ತಿದ್ದಾರೆ. ಒಟ್ಟಾರೆ ಎಲ್ಲಾ ಮೂರು ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ನಿರತರಾಗಿದ್ದಾರೆ.