ಸುದ್ದಿಮೂಲ ವಾರ್ತೆ
ಮೈಸೂರು, ಜು.27 : ಮೈಸೂರು ಭಾಗದ ಹಾರಂಗಿ, ಕೆಆರ್ಎಸ್, ಹೇಮಾವತಿ ಮತ್ತು ಕಬಿನಿ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಗುರುವಾರ ಮಳೆ ಕಡಿಮೆಯಾಗಿದೆ. ಇದರಿಂದ ಈ ಜಲಾಶಯಗಳ ಒಳಹರಿವು ಕೊಂಚ ಕಡಿಮೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಇಂದು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಮಳೆ ಹಿಂದಿನ ದಿನಗಳಂತೆ ಆರ್ಭಟಿಸಲಿಲ್ಲ.
ಹಲವೆಡೆ ಮೋಡದ ನಡುವೆ ಸೂರ್ಯ ಕಾಣಿಸಿಕೊಂಡ ಕಾರಣ ಮಳೆ-ಗಾಳಿಯಿಂದ ನಾಲ್ಕೈದು ದಿನಗಳಿಂದ ತತ್ತರಿಸಿದ್ದ ಜನರಿಗೆ ಬೆಚ್ಚನೆ ಸ್ಪರ್ಶ ನೀಡಿದೆ. ಕಬಿನಿಯಿಂದ ಹೆಚ್ಚು ನೀರು ಬಿಡುಗಡೆ ಮಾಡಿದ್ದರಿಂದ ಮೈಸೂರು ಜಿಲ್ಲೆ ನಂಜನಗೂಡಿನ ಕಪಿಲಾ ನದಿಯ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಿದೆ. ನೀರಿಗೆ ಇಳಿಯದಂತೆ ಭಕ್ತಾದಿಗಳಿಗೆ ದೇವಸ್ಥಾನ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.
ಕೇರಳದ ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು ಕಬಿನಿ ಜಲಾಶಯ ತುಂಬಿದೆ. ಸದ್ಯ 24,901 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಹೆಚ್.ಡಿ.ಕೋಟೆಯ ಬಿದರಹಳ್ಳಿ ಸೇತುವೆ ಮುಳುಗಡೆಯಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ಪಾತ್ರದ ಜನರಿಗೆ ಮನವಿ ಮಾಡಲಾಗಿದೆ.
ಮಡಿಕೇರಿಯ ಭಾಗಮಂಡಲ, ಕುಶಾಲನಗರ ಪ್ರದೇಶದಲ್ಲಿ ಅಲ್ಲಲ್ಲಿ ಮಳೆಗೆ ಗೋಡೆ ಕುಸಿದ ಘಟನೆಗಳು ಸಂಭವಿಸಿದ್ದರೆ, ಹಾಸನ ಜಿಲ್ಲಾದ್ಯಂತ ಇಡೀ ದಿನ ಜಿಟಿಜಿಟಿ ಮಳೆಯಾಗುತ್ತಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಇನ್ನೂ ಮಂಡ್ಯ ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗುತ್ತಿದೆ.
ಜಲಾಶಯಗಳ ನೀರಿನ ಮಟ್ಟ ಹೀಗಿದೆ.
ಹೇಮಾವತಿ
ಗರಿಷ್ಠ ಮಟ್ಟ- 2922 ಅಡಿಗಳು.
ಇಂದಿನ ಮಟ್ಟ-2910.75.
————-
ಕೆಆರ್ಎಸ್
ಗರಿಷ್ಠ ಮಟ್ಟ-124.80 ಅಡಿಗಳು.
ಇಂದಿನ ಮಟ್ಟ-108.62.
—————
ಕಬಿನಿ
ಗರಿಷ್ಠ ಮಟ್ಟ-2284 ಅಡಿಗಳು.
ಇಂದಿನ ಮಟ್ಟ-2286.46 ಅಡಿಗಳು.
…………..
ಹಾರಂಗಿ
ಗರಿಷ್ಠ ಮಟ್ಟ- 2859
ಅಡಿಗಳು.
ಇಂದಿನ ಮಟ್ಟ-2282.46 ಅಡಿಗಳು.