ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.23: ಭಾರತೀಯ ಸಂಸ್ಕೃತಿಕ ಬೇರುಗಳು ಎಲ್ಲಿ ಹರಡಿಕೊಂಡಿವೆಯೋ ಅಲ್ಲಿ ಮಾತ್ರ ಶಿಕ್ಷಕರಿಗೆ ಮಹೋನ್ನತ ಗೌರವ ದೊರೆಯುತ್ತದೆ. ನಮ್ಮಲ್ಲಿ ಅಕ್ಷರ ಕಲಿಸುವವರಿಗೆ ಬಹು ಎತ್ತರದ ಸ್ಥಾನ ದೊರೆಯುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದ್ದಾರೆ.
ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಕ್ಯಾಮ್ಸ್ ದಕ್ಷಿಣ ವಲಯ – 1 ಮತ್ತು 2 ರ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಕ ಸ್ನೇಹಿತ, ಗುರು, ಮಾರ್ಗದರ್ಶಕ ಎಲ್ಲವೂ ಆಗಿದ್ದಾನೆ. ಬೇರೆ ದೇಶಗಳಲ್ಲಿ ಶಿಕ್ಷಕರದ್ದು ವೇತನ ಪಡೆಯುವ ಒಂದು ವೃತ್ತಿ ಮಾತ್ರ. ನಮ್ಮಲ್ಲಿ ಗುರುವಿನ ದರ್ಶನವಾದರೆ ಪಾವನ ಎಂಬ ಮನಸ್ಥಿತಿ ಇದೆ. ಇದು ನಮ್ಮ ದೇಶದ ಅತಿ ದೊಡ್ಡ ಸೌಭಾಗ್ಯ ಎಂದರು.
ನಮ್ಮ ಶಾಸನ ಸಭೆಗಳು ಸಹ ಶಿಕ್ಷಣ ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ಅತ್ಯಂತ ಪ್ರಬುದ್ಧವಾಗಿ ಬೆಳಕು ಚೆಲ್ಲುತ್ತಿದ್ದು, ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಮೂಲತಃ ಬೋಧಕ ವೃತ್ತಿಯಿಂದ ಬಂದ ತಮಗೆ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಅತ್ಯಂತ ಸಂತಸ ತರುತ್ತದೆ ಎಂದು ಹೇಳಿದರು.
ವಿಧಾನಪರಿಷತ್ತಿನ ಮಾಜಿ ಉಪಸಭಾಪತಿ ಪುಟ್ಟಣ್ಣ ಮಾತನಾಡಿ, ಹಿಂದಿನ ಶಿಕ್ಷಣ ವ್ಯವಸ್ಥೆ ಈಗಿಲ್ಲ, ಇಂದಿನ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ಶಿಕ್ಷಕರ ವೃತ್ತಿ ಕವಲು ಹಾದಿಯಲ್ಲಿದೆ. ಈಗಿನ ಪರಿಸ್ಥಿತಿಯಲ್ಲಿ ಅತ್ಯಂತ ಒತ್ತಡದಲ್ಲಿ ಮತ್ತು ಸೂಕ್ಷ್ಮವಾಗಿ ಕೆಲಸ ಮಾಡಬೇಕಾದ ಸನ್ನಿವೇಶ ಎದುರಾಗಿದೆ. ಹೀಗಾಗಿ ವಕೀಲರು ಮತ್ತು ವೈದ್ಯಕೀಯ ವೃತ್ತಿಪರರಿಗೆ ಇರುವ ರಕ್ಷಣೆ ಶಿಕ್ಷಕರಿಗೂ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ತಿದ್ದುಪಡಿಯಾಗದಿದ್ದರೆ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಾಧ್ಯವಿಲ್ಲ ಎಂದರು.
ಸರ್ಕಾರಿ ಶಿಕ್ಷಕರಿಗೆ ನೀಡುವ ಶಿಕ್ಷಕರ ಪ್ರಶಸ್ತಿ ಮುಂದಿನ ವರ್ಷದಿಂದ ಅನುದಾನಿತ ಮತ್ತು ಖಾಸಗಿ ಶಾಲೆಗಳ ಶಿಕ್ಷಕರಿಗೂ ದೊರೆಯಲಿದ್ದು, ಈ ಸಂಬಂಧ ಶೀಘ್ರದಲ್ಲೇ ಆದೇಶ ಜಾರಿಯಾಗಲಿದೆ. ಸರ್ಕಾರದ ದೃಷ್ಟಿಯಲ್ಲಿ ಶಿಕ್ಷಕರನ್ನು ಸಮಾನವಾಗಿ ನೋಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಯಾಮ್ಸ್ ದಕ್ಷಿಣ ವಲಯ – 1 ಹಾಗೂ 2 ರ ಗೌರವಾಧ್ಯಕ್ಷ ಜಯಪ್ರಕಾಶ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿ ವೆಂಕಟರಾಮೇಗೌಡ, ಕ್ರೆಡೋ ಅರ್ಲಿ ಚೈಲ್ಡ್ ವುಡ್ ನ ಮೃದುಲ ಶ್ರೀಧರ್, ಶಿಕ್ಷಣಾಧಿಕಾರಿಗಳಾದ ಎನ್. ವೆಂಕಟೇಶ್, ನಗೆ ಯೋಗದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿರುವ ರಂಗಲಕ್ಷ್ಮಿ ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.