ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.30: ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ- 2023ರ ಅಂಗವಾಗಿ ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮವನ್ನು ಜಿಲ್ಲಾ ಮತ್ತು ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ ಅವರು ನಗರದ ಸರ್ಕಾರಿ ಡಿಗ್ರಿ ಕಾಲೇಜು ಮುಂಭಾಗದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಯಾವುದೇ ಆಸೆ ಆಮಿಷೆಗಳಿಗೆ ಒಳಗಾಗದೇ ಎಲ್ಲರೂ ಕಡ್ಡಾಯವಾಗಿ ಮೇ-10 ರಂದು ಮತದಾನ ಮಾಡಬೇಕು. ಮತದಾನವು ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿರುವ ಒಂದು ವರ. ಅದನ್ನು ಹಬ್ಬದ ಸಂಭ್ರಮಾಚರಣೆಯಂತೆ ಭಾವಿಸಿ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವುದರೊಂದಿಗೆ ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಎಂದರು.
ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮತದಾನ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಿ, ಮತದಾನದ ಪ್ರತಿಜ್ಞಾ ವಿಧಿಯನ್ನು ಮಾನ್ಯ ಬೋಧಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮತಗಟ್ಟೆ ಕ್ಷೇತ್ರಗಳ ವೀಕ್ಷಕ ಜಂದಲ್ ಅಕ್ಬರ್ ರಜಪೂತ, ತಾಲ್ಲೂಕು ಚುನಾವಣಾಧಿಕಾರಿ ಜಾವಿದ ನಸೀಮಾ ಖಾನಮ್, ತಹಸೀಲ್ದಾರ್ ಸ್ವಾಮಿ, ನಗರಸಭೆ ಕಮಿಷನರ್ ಶ್ರೀಕಾಂತ್, ಸಿಡಿಪಿಓ ನೌತಾಜ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ತಿಮ್ಮರಾಜು, ಸರ್ಕಾರಿ ಡಿಗ್ರಿ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಯವರು ಸೇರಿದಂತೆ ಇತರರು ಹಾಜರಿದ್ದರು.