ಸುದ್ದಿಮೂಲ ವಾರ್ತೆ
ಮೈಸೂರು, ಮೇ 23: ಮೈಸೂರು ಜಿಲ್ಲೆಯವರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತವರು ಜಿಲ್ಲೆ ಮೈಸೂರು ಅಥವಾ ಪಕ್ಕದ ಮಂಡ್ಯ ಜಿಲ್ಲೆಯಿಂದ ಒಬ್ಬರನ್ನಾದರೂ ಮಂತ್ರಿಯನ್ನಾಗಿ ಮಾಡಿ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಜಿಲ್ಲೆಯ ಹಿರಿಯ ಶಾಸಕರಾದ ಮಾಜಿ ಸಚಿವರಾದ ತನ್ವೀರ್ ಸೇಠ್, ದಾ.ಎಚ್.ಸಿ.ಮಹಾದೇವಪ್ಪ ಮತ್ತು ಕೆ.ವೆಂಕಟೇಶ್ ಅವರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೇ ? ಯಾರಿಗೆ ಸಿಗಲ್ಲ? ಎಂಬ ವಿಷಯ ಸುತ್ತಲು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಪ್ರಥಮ ಕಂತಿನಲ್ಲೆ ಸಚಿವ ಸ್ಥಾನ ಸಿಗದ ಕಾರಣ ಆ ಮೂವರು ಪ್ರಭಾವಿ ಶಾಸಕರು ಅಸಮಾಧಾನ ಆಗಿದ್ದಾರೆ ಎಂಬುದಕ್ಕೆ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಕೆಲ ದಿನಗಳ ಹಿಂದೆ ನಡೆದ ನೂತನ ಶಾಸಕರ ಅಭಿನಂದನಾ
ಕಾರ್ಯಕ್ರಮಕ್ಕೆ ಗೈರಾಗಿದ್ದನ್ನು ಉದಾಹರಣೆಯಾಗಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂತ್ರಿಗಿರಿ ನಿರೀಕ್ಷೆಯಲ್ಲಿ ಇರುವ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಕೆ ವೆಂಕಟೇಶ್, ಮುನಿಸಿಕೊಂಡಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ.
ಈ ಮೂವರು ನಾಯಕರು ತಲಾ ಆರು ಬಾರಿ ಗೆದ್ದಿದ್ದು, ದಲಿತ ಕೋಟಾದಲ್ಲಿ ಡಾ.ಹೆಚ್.ಸಿ.ಮಹದೇವಪ್ಪ, ಮುಸ್ಲಿಂ ಕೋಟಾದಡಿ ತನ್ವೀರ್ ಸೇಠ್, ಒಕ್ಕಲಿಗ ಕೋಟಾದಡಿ ಕೆ.ವೆಂಕಟೇಶ್, ಮೊದಲ ಸಂಪುಟದಲ್ಲೇ ತಮಗೆ ಅವಕಾಶ ಸಿಗುವ ನಿರೀಕ್ಷೆ ಈಗ ಹುಸಿಯಾಗಿದೆ. 2ನೇ ಪಟ್ಟಿಯಲ್ಲಾದರೂ ಮೂವರು ಸಚಿವ ಸ್ಥಾನ ಪಡೆಯಲು ತೀವ್ರ ಲಾಬಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಹಿಂದಿನಿಂದಲೂ ಸಿದ್ದರಾಮಯ್ಯ ಮತ್ತು ತನ್ವೀರ್ ಸೇಠ್ ನಡುವಿನ ಸಂಬಂಧ ಮೇಲ್ನೋಟಕ್ಕೆ ಚೆನ್ನಾಗಿದೆ ಎಂದು ಕಾಣಿಸಿದರೂ ಒಳನೋಟದಲ್ಲಿ ಸರಿಯಿಲ್ಲ. ಚುನಾವಣೆಗೆ ಮುಂಚೆ ಸೇಠ್ ಸರ್ಧಿಸುವ ನರಸಿಂಹರಾಜ ಕ್ಷೇತ್ರಕ್ಕೆ ಈಗ ಮಂತ್ರಿ ಆಗಿರುವ ಜಮೀರ್ ಅಹಮದ್ ಬಂದು, ತಮ್ಮ ಬೆಂಬಲಿಗ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಿದ್ದು ಸೇಠ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದ ಮುನಿಸಿಕೊಂಡ ಸೇಠ್ ತಾವು ಚುನಾವಣೆಯಲ್ಲಿ ಸ್ಪರ್ಧಿಸರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಜಮೀರ್ ಘೋಷಣೆ ಮಾಡುವ ಹಿಂದೆ ಸಿದ್ದರಾಮಯ್ಯನವರ ಬೆಂಬಲ ಇದೆ ಎಂಬ ಗುಮಾನಿ ಸೇಠ್ ಅಭಿಮಾನಿಗಳದ್ದಾಗಿತ್ತು. ಪ್ರಥಮ ಕಂತಿನಲ್ಲೇ 6 ಬಾರಿ ಗೆದ್ದಿರುವ ಸೇಠ್ಗೆ ಕೊಡಬೇಕಿತ್ತು, ಡಿಸಿಎಂ ಕೈ ಮೇಲಾದರೆ ಇವರಿಗೆ ಸಿಗುತ್ತದೆ, ಇಲ್ಲದಿದ್ದರೆ ಸಿಗುವುದಿಲ್ಲ ಎಂದು ವಾದಿಸಲಾಗುತ್ತಿದೆ.
ಡಾಕ್ಟರ್ಗೆ ಸಿದ್ದರಾಮಯ್ಯನವರೇ ಶ್ರೀರಕ್ಷೆ:
ಡಾ.ಎಚ್.ಸಿ.ಮಹಾದೇವಪ್ಪನವರಿಗೆ ಸಿಎಂ ಸಿದ್ದರಾಮಯ್ಯನವರೇ ಶ್ರೀರಕ್ಷೆ. ಆದರೆ ಈಗ ಮಂಡ್ಯ ಜಿಲ್ಲೆ ಮಳವಳ್ಳಿ ಮೀಸಲು ಕ್ಷೇತ್ರದಿಂದ ಆಯ್ಕೆ ಆಗಿರುವ ನರೇಂದ್ರ ಸ್ವಾಮಿ ಅವರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಈಗಾಗಲೇ ದಲಿತ ಸಮುದಾಯದ ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ, ಎಚ್. ಮುನಿಯಪ್ಪ ಅವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಡಾ.ಮಹಾದೇವಪ್ಪ ಅಥವಾ ನರೇಂದ್ರ ಸ್ವಾಮಿ ಅವರಲ್ಲೊಬ್ಬರಿಗೆ ಸಚಿವ ಸ್ಥಾನ ಸಿಗುವ ಸಂಭವವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವೆಂಕಟೇಶ್ಗೆ ಇಬ್ಬರ ಅಭಯ
ಮಾಜಿ ಸಚಿವ ಕೆ.ವೆಂಕಟೇಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವೆ ಉತ್ತಮ ಸಂಬಂಧವಿದೆ. ಆದರೂ ಈ ಜಿಲ್ಲೆಗಿಂತ ಪಕ್ಕದ ಮಂಡ್ಯ ಜಿಲ್ಲೆಯ ಮಾಜಿ ಸಚಿವ ಚೆಲುವರಾಯ ಸ್ವಾಮಿ ಅವರಿಗೆ ನೀಡಿದರೆ, ನಾಯಕ ಸಮುದಾಯದಲ್ಲಿ ಹೊಸಮುಖಗಳಿಗೆ ನೀಡಬೇಕೆಂದಾದರೆ ಎಚ್.ಡಿ.ಕೋಟೆಯಿಂದ 2ನೇ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿರುವ ಯುವ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ನೀಡಿದರೂ ಆಶ್ಷರ್ಯವಿಲ್ಲ. ಹೀಗಾದರೆ ವೆಂಕಟೇಶ್ ಅವರಿಗೆ ಸಚಿವ ಸ್ಥಾನ ಸಿಗುವುದು ಸುಲಭ ಸಾಧ್ಯವಲ್ಲ.
ಸರಳ ಬಹುಮತ ಬಂದಿದ್ದರೇ ?
ಕಾಂಗ್ರೆಸ್ಗೆ ಸರಳ ಬಹುಮತ ಬಂದಿದ್ದರೆ ಮೂವರಿಗೂ ಜಾತಿ ಸಮೀಕರಣದ ಆಧಾರದ ಮೇಲೆ ಸಚಿವಗಿರಿ ಸಿಗುತ್ತಿತ್ತೆನೋ. ಆದರೆ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳು ಬಂದಿರುವ ಕಾರಣ ಒಬ್ಬರಿಗೆ ಅಥವಾ ಇಬ್ಬರಿಗೆ ಸಿಹಬಹುದು. ಏನಾದರೂ ಸಿದ್ದರಾಮಯ್ಯ ಸಿಎಂ ಆದರೆ ಒಬ್ಬರಿಗೆ ಮಾತ್ರ ಸಿಗಲಿಕ್ಕೆ ಸಾಧ್ಯ ಎಂದು ಕೂಡ ಪ್ರತಿಪಾದನೆ ಮಾಡಲಾಗುತ್ತಿದೆ.
ತನ್ವೀರ್ ಸೇಠ್ ನರಸಿಂಹರಾಜ ಕ್ಷೇತ್ರದಿಂದ 20008 ರಿಂದ 2023 ರವರೆಗೆ ಸತತವಾಗಿ 6 ಬಾರಿ ಶಾಸಕರಾಗಿದ್ದು, ಧರ್ಮಸಿಂಗ್ ಸಿಎಂ ಆಗಿದ್ದಾಗ ಕಾರ್ಮಿಕ ಮತ್ತು ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಪ್ರಾಥಮಿಕ, ಪ್ರೌಢ ಶಿಕ್ಷಣರಾಗಿದ್ದರು. ಜಿಲ್ಲೆಯಿಂದ ಮುಸ್ಲಿಂ ಸಮುದಾಯದಿಂದ ಆಯ್ಕೆ ಆಗಿರುವ ಏಕೈಕ ವ್ಯಕ್ತಿ.
ಟಿ.ನರಸೀಪುರ ಮೀಸಲು ಕ್ಷೇತ್ರದಿಂದ 6ನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿರುವ ಡಾ.ಎಚ್.ಸಿ.ಮಹಾದೇವಪ್ಪನವರು ಜೆ.ಎಚ್.ಪಟೇಲ್ ಮಂತ್ರಿ ಮಂಡಲದಲ್ಲಿ ಆರೋಗ್ಯ ಸಚಿವ, ಧರ್ಮಸಿಂಗ್ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸಿದ್ದರಾಮಯ್ಯನವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದವರು.
ಪಿರಿಯಾಪಟ್ಟಣ ಕ್ಷೇತ್ರದಿಂದ 6ನೇ ಬಾರಿಗೆ ಆಯ್ಕೆ ಆಗಿರುವ ವಕ್ಕಲಿಗ ಸಮುದಾಯದ ಕೆ. ವೆಂಕಟೇಶ್ ಅವರು ಜೆ.ಎಚ್.ಪಟೇಲ್ ಕಾಲದಲ್ಲಿ ಕಾಡಾ ಸಚಿವರಾಗಿದ್ದರಲ್ಲದೇ, ಸಿದ್ದರಾಮಯ್ಯ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿದ್ದರು.