ಬೆಂಗಳೂರು,ಆ18: ಸಹಜವಾಗಿ ಮಳೆಯಾದ ವರ್ಷದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರಿನ ಹಂಚಿಕೆ ಸರಾಗವಾಗಿ ನಡೆದುಕೊಂಡು ಬರುತ್ತಿದೆ. ಆದರೆ, ಮಳೆ ಕಡಿಮೆಯಾದ ವರ್ಷಗಳಲ್ಲಿ ಎರಡೂ ರಾಜ್ಯಗಳು ಸಂಕಷ್ಟವನ್ನು ಕೂಡ ಪರಸ್ಪರ ಹಂಚಿಕೊಳ್ಳಬೇಕು. ಆಗ ನೀರು ಹಂಚಿಕೆಯಲ್ಲಿ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಇಲ್ಲಿನ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಎರಡೂ ರಾಜ್ಯಗಳ ನಡುವೆ ಮತ್ತೆ ವಿವಾದ ತಲೆದೋರಿರುವ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ವರ್ಷ ರಾಜ್ಯದಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಹೀಗಾಗಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಈ ಸಂಬಂಧವಾಗಿ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ನೆಲ, ಜಲ, ಭಾಷೆಯ ಪ್ರಶ್ನೆ ಬಂದಾಗ ರಾಜಕಾರಣಕ್ಕಿಂತ ರಾಜ್ಯದ ಹಿತ ಮುಖ್ಯವೆಂದು ನಮ್ಮ ಸರಕಾರ ತೀರ್ಮಾನಿಸಿದೆ. ಇಲ್ಲಿ ನಾವೆಲ್ಲ್ರರೂ ಒಂದು ಎಂದು ಅವರು ತಿಳಿಸಿದ್ದಾರೆ.
ಹಿಂದೆ ನಾನೂ ಸಹ ಜಲಸಂಪನ್ಮೂಲ ಸಚಿವನಾಗಿದ್ದೆ. ಸಂಕಷ್ಟದ ವರ್ಷದಲ್ಲಿ ಆಗಿಂದಾಗ್ಗೆ ಸಮಸ್ಯೆ ಉದ್ಭವಿಸಿ, ನ್ಯಾಯಾಲಯದ ಮೆಟ್ಟಿಲಿನಲ್ಲಿ ನಿಲ್ಲಬೇಕಾದ ಪ್ರಮೇಯ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ತಮಿಳುನಾಡಿನ ಅಣೆಕಟ್ಟುಗಳಲ್ಲಿರುವ ನೀರಿನ ಸಂಗ್ರಹ, ಅವರ ಅಚ್ಚುಕಟ್ಟು ಪ್ರದೇಶ, ಅವರಿಗೆ ಬೇಕಾದ ನೀರಿನ ಪ್ರಮಾಣ ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಕಾವೇರಿ ನೀರಿನ ಹಂಚಿಕೆಯ ಅಂತಿಮ ತೀರ್ಪಿನಲ್ಲಿ ನ್ಯಾಯವಾದಿ ಫಾಲಿ ನಾರಿಮನ್ ರಾಜ್ಯದ ಪರವಾಗಿ ವಾದಿಸಿದ್ದರು. ಆಗ ನಾನೂ ಸೇರಿದಂತೆ ಅಧಿಕಾರಿಗಳು ಅವರಿಗೆ ರಾಜ್ಯದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟೆವು. ಇದರಿಂದಾಗಿ ಬೆಂಗಳೂರಿಗೆ ಹೆಚ್ಚುವರಿಯಾಗಿ 17 ಟಿಎಂಸಿ ನೀರು ಸಿಕ್ಕಿತು. ಈ ವಿಚಾರದಲ್ಲಿ ಬೆಂಗಳೂರಿನ ಉತ್ತರ ಭಾಗವು ಕಾವೇರಿ ಕೊಳ್ಳಕ್ಕೆ ಬರುವುದಿಲ್ಲ ಎನ್ನುವ ತಮಿಳುನಾಡಿನ ವಾದ ಬಿದ್ದು ಹೋಯಿತು. ಅಂತಿಮವಾಗಿ ಈ ತೀರ್ಪಿನಲ್ಲಿ ರಾಜ್ಯಕ್ಕೆ ಲಾಭವಾಗುವಂತೆ ನೋಡಿಕೊಂಡೆವು. ಇದರಲ್ಲಿ ಯಾರು ಏನೇ ಹೇಳಲಿ, ನಾರಿಮನ್ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಅವರ ಶ್ರಮದಿಂದಾಗಿ ಇಂದು ಬೆಂಗಳೂರಿನ ಬಹುಭಾಗಕ್ಕೆ ಕಾವೇರಿ ನೀರು ಸಿಗುತ್ತಿದೆ ಎಂದು ಅವರು ವಿವರಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕೆಲವೊಮ್ಮೆ ರಾಜ್ಯದ ಹಿತಕ್ಕೆ ವ್ಯತಿರಿಕ್ತವಾಗಿ ಸೂಚನೆಗಳನ್ನು ನೀಡಿದೆ. ಮಳೆಯ ಕೊರತೆ ಇದ್ದಾಗ ವಸ್ತುಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅನ್ಯಾಯವಾಗುತ್ತದೆ ಎಂದು ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.