ಸುದ್ದಿಮೂಲವಾರ್ತೆ ಮಾನ್ವಿ ಏ-4
ಪತ್ರಕರ್ತರು ಜನಪರ ಕಾಳಜಿ ತೋರಿಸುವ ವಾರಕ್ಕೊಂದು ವಿಶೇಷ ವರದಿ ಬರೆಯುವ ಮೂಲಕ ತಮ್ಮ ವೃತ್ತಿ ನೈಪುಣ್ಯ, ಕ್ರಿಯಾಶೀಲ ಬರವಣಿಗೆ ಹಾಗೂ ಸಾಮಾಜಿಕ ಕಾಳಜಿಯನ್ನು ವೃದ್ದಿಪಡಿಸಿಕೊಳ್ಳಬೇಕೆಂದು ಸುದ್ದಿಮೂಲ ವರದಿಗಾರ ಹಾಗೂ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಪರಮೇಶ ಹೇಳಿದರು.
ಮಂಗಳವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾಧ್ಯಮ ರಂಗವು ಇಂದು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಅನೇಕ ಬದಲಾವಣೆಗಳಿಗೆ ತನ್ನನ್ನು ತೆರೆದು ಕೊಂಡಿದೆ. ಸಾಮಾಜಿಕ ಜಾಲತಾಣ ಪ್ರಭಾವಶಾಲಿಯಾಗಿರುವ ಇಂದಿನ ದಿನಗಳಲ್ಲಿ ಮುದ್ರಣ ಮಾಧ್ಯಮ ಹಲವು ರೂಪಗಳ ಸುದ್ದಿಗಳನ್ನು ಜನರಿಗೆ ತಲುಪಿಸುವುದು ಸವಾಲಿನ ಕೆಲಸವಾಗಿದೆ. ಇಂತಹ ಸನ್ನಿವೇಶದಲ್ಲಿ ತಾಲೂಕು ಮಟ್ಟದ ಪತ್ರಕರ್ತರಾದ ನಾವು ವಾರಕ್ಕೊಂದು ಸಲ
ನೈಜ ಹಾಗೂ ಜನಪರವಾಗಿರುವ ವಿಶೇಷ ವರದಿಗಳನ್ನು ಬರೆದು ಜನಧ್ವನಿಯಾಗಿ ಮತ್ತು ನಮ್ಮ ಸಂಘಕ್ಕೆ ಬದ್ದರಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣಬಸವ ನೀರಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು ಅಧ್ಯಕ್ಷತೆ ವಹಿಸಿದ್ದ ತಾಲೂಕಾಧ್ಯಕ್ಷ ನಾಗರಾಜ ತಡಕಲ್, ಹಿರಿಯ ಪತ್ರಕರ್ತ ಹನುಮಂತಪ್ಪ ಕೊಟ್ನೆಕಲ್ ಮಾತನಾಡಿದರು.
ನೂತನ ಅಧ್ಯಕ್ಷ ನಾಗರಾಜ ತಡಕಲ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ಸಿದ್ರಾಮಯ್ಯಸ್ವಾಮಿ ಹಾಗೂ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮಾರೆಪ್ಪ ದೊಡ್ಡಮನಿ ಇವರಿಂದ ಸಂಘದ ನಡವಳಿಕೆ ಪುಸ್ತಕ ಪಡೆಯುವುದರ ಮೂಲಕ ಅಧಿಕಾರ ಸ್ವೀಕಾರ ಮಾಡಿದರು. ನಂತರ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯ ಹನುಮಂತ ಬ್ಯಾಗವಾಟ ಸ್ವಾಗತಿಸಿದರು. ರಾಜಶೇಖರ ನಿರೂಪಿಸಿದರೆ, ಖಜಾಂಚಿ ನವೀನ್ ಕುಮಾರ ವಂದಿಸಿದರು.