ಸುದ್ದಿಮೂಲ ವಾರ್ತೆ
ಮೈಸೂರು ಅ.18 : ಪ್ರೌಢ ಸಾಹಿತ್ಯಕ್ಕಿಂತ ಮಕ್ಕಳ ಸಾಹಿತ್ಯ ದೊಡ್ಡದು, ಮಕ್ಕಳಿಗೂ ಸಾಹಿತ್ಯ ಬೇಕು. ಒಳ್ಳೆಯ ಪ್ರಜೆಗಳಾಗಬೇಕೆಂದರೆ ಮಕ್ಕಳ ಸಾಹಿತ್ಯವನ್ನು ಓದಬೇಕು ಎಂದು ಮಕ್ಕಳ ಸಾಹಿತಿ ಪ.ಗು ಸಿದ್ದಪುರ ಹೇಳಿದರು.
ಮೈಸೂರು ದಸರಾ ಪ್ರಯುಕ್ತ ನಗರದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬುಧವಾರ ಚಿಗುರು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಪತ್ತು ನಮ್ಮ ಮಕ್ಕಳು, ಮಕ್ಕಳಿದ್ದರೆ ಶಾಲೆ, ಮಕ್ಕಳಿದ್ದರೆ ಮನೆ, ಚಿಗುರು ಕವಿ ಘೋಷ್ಠಿ ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಸಾಹಿತ್ಯವು ಪರಿಪೂರ್ಣವಾದುದು ಸಾಹಿತ್ಯದ ಸಂಸ್ಕಾರವು ಮನೆಯಿಂದಲೇ ಶುರುವಾಗುತ್ತದೆ. ಶಿಶು ಪ್ರಾಸವನ್ನು ಕೇಳಿ ಮಕ್ಕಳು ದೊಡ್ಡವರಾಗುತ್ತಾರೆ. ಮಕ್ಕಳ ಸಾಹಿತ್ಯವನ್ನು ಬರೆಯಲು ವಯಸ್ಸು ಮುಖ್ಯವಲ್ಲ ಅದನ್ನು ಬರೆಯುವಾಗ ಪರಕಾಯ ಪ್ರವೇಶ ಮಾಡಿ ನಾವು ನಮ್ಮ ಬಾಲ್ಯ ನೆನಪಿಸಿಕೊಂಡು ಭಾವನಾತ್ಮಕವಾಗಿ ಮಕ್ಕಳ ಸಾಹಿತ್ಯವನ್ನು ಬರೆಯುತ್ತೇವೆ ಎಂದರು.
ಚಿಗುರು ಕವಿಗೋಷ್ಠಿಯ ಕಾರ್ಯಧ್ಯಕ್ಷೆ ಡಾ.ಎಸ್.ವಿಜಯ್ ಕುಮಾರಿ ಕರಿಕಲ್, ಕವಯತ್ರಿ ಡಾ.ಎನ್.ಕೆ ಲೋಲಾಕ್ಷಿ, ಚಿಗುರು ಕವಿಗೋಷ್ಠಿ ಉಪಸಮಿತಿಯ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಮತ್ತು ಉಪಸಮಿತಿಯ ಅಧ್ಯಕ್ಷ ಮಹೇಶ್ ಅಂಬಲಾರೆ ಹಾಗೂ ಉಪಾಧ್ಯಕ್ಷರಾದ ದಂಡಿನ ಕೆರೆ ನಾಗರಾಜು, ರವಿಚಂದ್ರನ್ ಇತರರು ಇದ್ದರು.