ಸುದ್ದಿಮೂಲ ವಾರ್ತೆ
ಅ. 17 : ದಸರಾ ಕವಿಗೋಷ್ಠಿ ವೇದಿಕೆಯಲ್ಲಿ ಸಮಾಜದ ಎಲ್ಲಾ ಸಮಸ್ಯೆಗಳನ್ನು ಕುರಿತು ಸುದೀರ್ಘ ಚರ್ಚೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಎಂದು ಹೇಳಿದರು.
ದಸರಾ ಮಹೋತ್ಸವದ ಅಂಗವಾಗಿ ಮಂಗಳವಾರ ಕಲಾಮಂದಿರಲ್ಲಿ ನಡೆದ ಕವಿಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ನಾಲ್ವಡಿ ಕೃಷ್ಣರಾಜರವರ ಆಡಳಿತವು ಈಗಿನ ಸಾಹಿತ್ಯ ಚಳುವಳಿಗೆ ಪ್ರೇರಣೆಯಾಗಲಿ ಎಂದು ಸಲಹೆ ನೀಡಿದರು.
ಸಾಹಿತ್ಯ ಕ್ಷೇತ್ರವು ಸಮಾಜದ ಮೇಲೆ ಬಹಳ ಪ್ರಭಾವ ಬೀರುತ್ತದೆ. ಸಾಹಿತ್ಯಕ್ಕೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಇದೆ. ಈ ಹಿನ್ನೆಲೆ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತಾಗಲಿ. ವಚನ ಸಾಹಿತ್ಯ ಚಳುವಳಿಯ ಮೂಲಕ ಸಮಾಜದಲ್ಲಿನ ಬದಲಾವಣೆಗಾಗಿ ಜಾಗೃತಿಯನ್ನು ಮೂಡಿಸಲಾಗಿದೆ.
ಅದರಂತೆ ಪ್ರಸ್ತುತ ನಮ್ಮ ದೇಶದಲ್ಲಿ ನಡೆಯುತ್ತಿರುವ ಅಸ್ಪೃಶ್ಯತೆ ಆಚರಣೆ, ಮಾನವ ಹಕ್ಕುಗಳ ಉಲ್ಲಂಘನೆ, ಲಿಂಗ ತಾರತಮ್ಯ, ಜಾತಿ ಪ್ರಭಾವ, ಅಧರ್ಮದ ನಡೆ ಇವೆಲ್ಲವನ್ನೂ ತಿದ್ದಿ ಸರಿದಾರಿಗೆ ತರಬೇಕಿದೆ. ಅದರೊಂದಿಗೆ ನಮ್ಮ ವಾಕ್ ಸ್ವಾತಂತ್ರ್ಯದ ಮೂಲಕ ಪ್ರಜಾಪ್ರಭುತ್ವ ತಳಹದಿಯನ್ನು ಸದೃಢಪಡಿಸುವ ಕೆಲಸ ಸಾಹಿತ್ಯ ಕ್ಷೇತ್ರದಿಂದ ಆಗಬೇಕಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಮರ್ಯಾದೆ ಹತ್ಯೆಯಂತಹ ಪ್ರಕರಣ ಇಡೀ ಮಾನವ ಕುಲ ತಲೆತಗ್ಗಿಸುವಂತದ್ದು. ಇಂತಹ ಅನೇಕ ಅನಿಷ್ಟ ಪದ್ದತಿಗಳನ್ನು ಖಂಡಿಸುವ ಮೂಲಕ ನಿರ್ಮೂಲನೆ ಮಾಡಬೇಕು. ಸಾಹಿತ್ಯ ಎಲ್ಲಾ ಅನಿಷ್ಟ ಪದ್ಧತಿಗಳಿಗೆ ಹರಿತವಾದ ಬರವಣಿಗೆ ಮೂಲಕ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಬೇಕು. ಮನುಷ್ಯರು ನೆಮ್ಮದಿಯಿಂದ ಬಾಳುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.
ಕವಿ ಜಯಂತ್ ಕಾಯ್ಕಿಣಿ ಮಾತನಾಡಿ, ಸಾಹಿತ್ಯ ಎಂಬುದು ವೈಚಾರಿಕತೆಯ ಹೊಸ ಬಾಗಿಲನ್ನು ತೆರೆಯುತ್ತದೆ. ಕನ್ನಡ ಪಾಠಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ತಮ್ಮ ಮಕ್ಕಳನ್ನು ಆಂಗ್ಲ ಪಾಠಶಾಲೆಗೆ ಸೇರಿಸುತ್ತಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕನ್ನಡ ಭಾಷೆ ಸಾಹಿತ್ಯದ ಕುರಿತು ಚಿಂತಿಸುವ ಅವಶ್ಯಕತೆ ನಿಜವಾಗಿಯೂ ನಮ್ಮ ಮುಂದಿದೆ ಎಂದು ಹೇಳಿದರು.
ಕವಯಿತ್ರಿ ಮಾಲತಿ ಶೆಟ್ಟಿ ಮಾತನಾಡಿ, ಸಾಹಿತ್ಯದ ಸೃಷ್ಟಿಗೆ ನಿರಂತರ ಅಧ್ಯಯನದ ಅವಶ್ಯಕತೆ ಇದೆ. ಸಂತೋಷವಾದಾಗ ಅಥವಾ ದುಃಖವಾದಾಗ ಮನಸ್ಸು ನನ್ನನ್ನು ಕೊಂಡೊಯ್ಯುವುದು ಕವಿತೆಯೆಡೆಗೆ ಎಂದು ಸಾಹಿತ್ಯದ ಮೇಲಿನ ಒಲವನ್ನು ವ್ಯಕ್ತಪಡಿಸಿದರು.
ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪ, ಸಾಹಿತಿ ಕುಂ. ವೀರಭದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕವಿಗೋಷ್ಠಿ ಉಪಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷರಾದ ಡಾ.ವಿಜಯಕುಮಾರಿ ಎಸ್. ಕರಿಕಲ್, ಕಾರ್ಯದರ್ಶಿ ಎಂ.ಎಸ್.ಗಿರಿಧರ್ ಸೇರಿದಂತೆ ಇನ್ನಿತರರು ಇದ್ದರು.