ಸುದ್ದಿಮೂಲ ವಾರ್ತೆ
ಆನೇಕಲ್,ಜೂ.21: ತಮಿಳುನಾಡು ಗಡಿಭಾಗದ ಹೊಸೂರಿನಲ್ಲಿ ಜೂ. 28 ರಂದು ಮರಕತಾಂಬಿಕಾ ಸಮೇತ ಚಂದ್ರ ಚೂಡೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ಪ್ರತಿಷ್ಠಾಪನೆ ಹಾಗೂ ಕುಂಬಾಭೀಷೇಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದೇವಾಲಯದ ಆಡಳಿತ ಮಂಡಳಿ ವತಿಯಿಂದ ರಾಜಗೋಪುರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಯಿತು.
ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ದೇವಾಲಯಲ್ಲಿ ಚಂದ್ರ ಚೂಡೇಶ್ವರ ಸ್ವಾಮಿ ಉದ್ಭವ ಮೂರ್ತಿಯಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಇತಿಹಾಸದಲ್ಲಿ ಚೋಳರು ಹಾಗೂ ಪಾಂಡ್ಯರ ಆಳ್ವಿಕೆಯಲ್ಲಿ ದೇವಾಲಯವನ್ನು ಅಭಿವೃದ್ದಿಪಡಿಸಲಾಗಿತ್ತು.
ಈಗ 2011 ರಲ್ಲಿ ದೇವಾಲಯದ ರಾಜ ಗೋಪುರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ 12 ವರ್ಷಗಳ ಕಾಲ ಕಾಮಗಾರಿ ನಡೆಸಿ, ಈಗ ಮಹಾ ರಾಜಗೋಪುರದ ಪ್ರತಿಷ್ಟಾಪನೆ ಹಾಗೂ ಕುಂಬಾಭಿಷೇಕ ಕಾರ್ಯವನ್ನು ಲಕ್ಷಾಂತರ ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಜೂ. 26 ಹಾಗೂ 27 ರಂದು ಎರಡು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನ ನಡೆಸಲಾಗುತ್ತಿದೆ. ಜೂನ್ 28 ಬೆಳ್ಳಗೆ 9 ರಿಂದ 10.30 ಗಂಟೆಗೆ ಶುಭಲಗ್ನದಲ್ಲಿ ರಾಜಗೋಪುರ ಪ್ರತಿಷ್ಠಾಪನೆ ಹಾಗೂ ಕುಂಬಾಭೀಷೇಕ ನಡೆಸಲು ತಿರ್ಮಾನಿಸಲಾಗಿದೆ.
ಕರ್ನಾಟಕ , ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಹಲವು ಕುಟುಂಬಗಳಿಗೆ ಚಂದ್ರ ಚೂಡೇಶ್ವರ ಸ್ವಾಮಿ ಕುಲದೇವತೆಯಾಗಿದೆ. 125 ಅಡಿ ಎತ್ತರದ 7 ಅಂತಸ್ತಿನ ಮಹಾರಾಜ ಗೋಪುರ ಪ್ರತಿಷ್ಠಾಪನೆಗೆ ಎಲ್ಲಾ ಸುತ್ತಮುತ್ತಲ ಭಕ್ತಾದಿಗಳು ಆಗಮಿಸಿ, ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಮನವಿ ಮಾಡಿದ್ದಾರೆ.